Sunday, September 4, 2011

ಮನದ ಅಂಗಳದಿ.........೫೬. ಗುಣಕಾರಿ(ಹೀಲಿಂಗ್) ಶಕ್ತಿ

`ನಮ್ಮ ಆಂತರ್ಯದಲ್ಲಿಯೇ ಅದ್ಭುತವಾದ ಶಕ್ತಿ ಅಡಗಿದೆ' ಎಂಬ ಅಂಶ ತಿಳಿದು ಅದರ ಬಗ್ಗೆ ಕುತೂಹಲ ಉಂಟಾದ ನಂತರ ನನ್ನ ನಿಧಾನಗತಿಯ ಓದು ಆ ದಿಕ್ಕಿನತ್ತ ತನ್ನ ಪಯಣವನ್ನು ಪ್ರಾರಂಭಿಸಿತು. ಅದಕ್ಕೆ ಸಂಬಂಧಿಸಿದ ಲೇಖನಗಳು, ಪುಸ್ತಕಗಳನ್ನು ಓದಲಾರಂಭಿಸಿದೆ. ಈ ನಡುವೆ ‘ತರಂಗ' ಸಾಪ್ತಾಹಿಕದಲ್ಲಿನ ನೇಮಿಚಂದ್ರ ಅವರ (ಮುಖಪುಟ) ಲೇಖನ ‘ಅಂತಃಶಕ್ತಿಯಿಂದ ಆರೋಗ್ಯ-ಕ್ಯಾನ್ಸರ್ ಗೆದ್ದ ಮಾಯಾ ತಿವಾರಿ-ಅನುಭವ ಕಥನ' ನನ್ನನ್ನು ಬಹಳವಾಗಿ ಆಕರ್ಷಿಸಿತು. ಹೇರಳವಾಗಿ ಹಣವನ್ನು ಗಳಿಸಿ ಪ್ರಸಿದ್ಧಿಯ ತುತ್ತ ತುದಿಯಲ್ಲಿದ್ದ ಅಮೇರಿಕನ್ ಫ್ಯಾಷನ್ ಡಿಸೈನರ್ ಮಾಯಾ, ತಮ್ಮ ೨೩ನೆಯ ವಯಸ್ಸಿನಲ್ಲಿಯೇ ತೀವ್ರ ಕ್ಯಾನ್ಸರ್ ಗೆ ಬಲಿಯಾಗಿ ಹನ್ನೆರಡು ಬಾರಿ ಶಸ್ತ್ರಚಿಕಿತ್ಸೆ, ಹಲವಾರು ರೇಡಿಯೇಷನ್ ಥೆರಪಿಗಳಾಗುತ್ತದೆ. ನಂತರ ವೈದ್ಯರು, ‘ನಿಮಗಿರುವುದು ಎರಡು ತಿಂಗಳು ಮಾತ್ರ' ಎಂದಿರುತ್ತಾರೆ. ಈಗ ೫೮ವರ್ಷದ ಮಾಯಾ ಕ್ಯಾನ್ಸರ್ ನಿಂದ ಸಂಪೂರ್ಣ ಗುಣಮುಖರಾಗಿ, ಸಾವಿರಾರು ಜನರಿಗೆ ಆರೋಗ್ಯದ ಹಾದಿಯನ್ನು ತೋರಿದ ಅದ್ಭುತ ನೈಜಕಥೆಯನ್ನು ನೇಮಿಚಂದ್ರರವರು ತೆರೆದಿಡುತ್ತಾರೆ!

‘ನಮ್ಮ ಇಡೀ ಜೀವನದ ಸ್ವಾಸ್ಥ್ಯದ ಗುಟ್ಟು ಸರಳ ಸಹಜ ಜೀವನದಲ್ಲಿ ಅಡಗಿದೆ. ಒಳ್ಳೆಯ ಪೌಷ್ಟಿಕ ಆಹಾರ, ಒಳ್ಳೆಯ ವಿಚಾರ, ನಿರ್ಮಲ ಮನಸ್ಸು, ದೈಹಿಕ ದುಡಿತ-ವ್ಯಾಯಾಮ, ಪ್ರಜ್ಞಾಪೂರ್ವಕ ಉಸಿರಾಟ-ಪ್ರಾಣಾಯಾಮ, ಧ್ಯಾನ, ಯೋಗ, ಬದುಕಿನ ಅನಂತ ಕೃಪೆಯ ಬಗ್ಗೆ ತೃಪ್ತ ಮನಸ್ಸು, ಮನಸ್ಸಿನ ಗಂಟುಗಳ ಸಿಕ್ಕು ಬಿಡಿಸಿ ಮಾನಸಿಕ ಒತ್ತಡದಿಂದ ಮುಕ್ತಿ-ಇಷ್ಟರಲ್ಲಿಯೇ ಆರೋಗ್ಯದ ಗುಟ್ಟಿದೆ. ನಮ್ಮೊಳಗಿನ ಗುಣವಾಗುವ ಆ ಅದ್ಭುತ ಶಕ್ತಿಯನ್ನು ನಾವು ಜಾಗೃತಗೊಳಿಸಲು ಸಾಧ್ಯವಿದೆ. ತೀವ್ರ ನೋವಿನ ಹಾದಿ ಸಂತಸದ ತಾಣಕ್ಕೆ ಕರೆದೊಯ್ಯುತ್ತದೆ. ನಮ್ಮ ಚಿಂತನೆ, ವಿಚಾರ, ಕ್ರಿಯೆಯ ನಡುವೆ ಸಾಮರಸ್ಯವಿರಬೇಕು,' ಎನ್ನುವುದು ಮಾಯಾರವರು ಕಂಡುಕೊಂಡ ಸತ್ಯ.

ಈ ಲೇಖನವನ್ನು ಓದಿದ ನಂತರ ಬಹಳ ದಿನಗಳ ಹಿಂದೆ ನಾನು ಒಂದು ಶಾಲೆಯನ್ನು ಸಂದರ್ಶಿಸಲು ಹೋಗಿದ್ದಾಗ ಅದರ ಹೊರ ಗೋಡೆಗಳ ಮೇಲೆ ಬರೆದಿದ್ದ ಉತ್ತಮ ಸೂಕ್ತಿಗಳು ಹಾಗೂ ಬರಹಗಳ ನಡುವೆ ‘ಹೀಲಿಂಗ್ ಕಪಾಸಿಟಿ'ಯ ಬಗ್ಗೆ ಇದ್ದದ್ದು ತುಂಬಾ ಇಷ್ಟವಾಗಿ ಅದನ್ನು ನನ್ನ ಮೊಬೈಲ್‌ನಲ್ಲಿಯೇ ಕ್ಲಿಕ್ಕಿಸಿಕೊಂಡು ಬಂದದ್ದು ನೆನಪಾಯ್ತು. (ಮೊದಲಿನಿಂದಲೂ ಉತ್ತಮ ಸೂಕ್ತಿಗಳು ಎಲ್ಲಿಯೇ ಕಂಡರೂ ಅವುಗಳನ್ನು ಬರೆದುಕೊಳ್ಳುವುದು ನನ್ನ ಮೆಚ್ಚಿನ ಹವ್ಯಾಸ.) ಆ ಶಾಲೆಯ ಡ್ರಾಯಿಂಗ್ ಶಿಕ್ಷಕರು ಬಹಳ ಮುದ್ದಾದ ಅಕ್ಷರಗಳಲ್ಲಿ ವರ್ಣರಂಜಿತವಾಗಿ ಬರೆದಿದ್ದರು. ಉನ್ನತ ಮಟ್ಟದ ಆ ಬರಹವನ್ನು ಇಂದು ಮಕ್ಕಳು ಅರ್ಥ ಮಾಡಿಕೊಳ್ಳಲಾಗದಿದ್ದರೂ ಒಂದಲ್ಲಾ ಒಂದು ದಿನ ಅವರಿಗೆ ಅದು ಗೋಚರಿಸುತ್ತದೆ ಎನ್ನುವ ಅವರ ಅಭಿಪ್ರಾಯಕ್ಕೆ ನಾನು ಮನಸಾ ವಂದಿಸುತ್ತೇನೆ. ಅದರ ಮೂಲಲೇಖಕರ ಬಗ್ಗೆ ಸರಿಯಾದ ಮಾಹಿತಿ ದೊರೆಯಲಿಲ್ಲ.

‘ಮನುಷ್ಯನಲ್ಲಿ ಅಂತರ್ಗತವಾಗಿ ಅದ್ಭುತವಾದ ‘ಹೀಲಿಂಗ್ ಕಪಾಸಿಟಿ' ಬೇಕಾದಷ್ಟಿರುತ್ತದೆ. ಮನುಷ್ಯನು ತನ್ನ ಮಾನಸಿಕ, ಶಾರೀರಿಕ ರುಗ್ಣತೆಗಳನ್ನು ತನಗೆ ತಾನೇ ವಾಸಿಮಾಡಿಕೊಳ್ಳುವ ಶಕ್ತಿಯನ್ನೇ ‘ಹೀಲಿಂಗ್ ಕಪಾಸಿಟಿ' ಎಂದು ಹೇಳಬಹುದು. ಒಬ್ಬ ಮನುಷ್ಯನಲ್ಲಿ ಈ ‘ಹೀಲಿಂಗ್ ಕಪಾಸಿಟಿ? ಎಷ್ಟು ಉಚ್ಛಸ್ಥಾಯಿಯಲ್ಲಿದ್ದರೆ ಆ ಮನುಷ್ಯನ ಮಾನಸಿಕ, ಶಾರೀರಿಕ ಆರೋಗ್ಯಗಳು ಅಷ್ಟು ಅದ್ಭುತವಾಗಿರುತ್ತವೆ ಅಂದಹಾಗಾಯ್ತು. ನಮಗೆ ಬರುವ ರೋಗಗಳಿಗೆ ಹೊರಗಿನಿಂದ ಔಷಧ ತೆಗೆದುಕೊಳ್ಳುವುದಕ್ಕಿಂತ ಒಳಗಿರುವ ಬ್ರಹ್ಮಾಂಡವಾದ ಎನರ್ಜಿಯನ್ನು ಉಪಯೋಗಿಸಿಕೊಂಡು ವಾಸಿಮಾಡಿಕೊಳ್ಳಬಹುದು.

ನಮ್ಮಲ್ಲಿಯೇ ‘ಹೀಲಿಂಗ್ ಮಾಡಿಕೊಳ್ಳುವುದು' ಎನ್ನುವುದು ಕ್ರಮೇಣ ಇಂದಿನ ದಿನಗಳಲ್ಲಿ ನಾವು ಮರೆತುಹೋಗುತ್ತಿರುವ ವಿಷಯವಾಗಿದೆ. ಯಾರಾದರೂ ಸರಿ ತಮಗಿರುವ ಎನರ್ಜಿಯ ಬಗ್ಗೆ ಅರ್ಥಮಾಡಿಕೊಂಡರೆ ಹೀಲ್ ಮಾಡಿಕೊಳ್ಳುವುದು ಸುಲಭವಾಗಿ ಸಾಧ್ಯವಾಗುತ್ತದೆ. ಅನಾರೋಗ್ಯದಿಂದ, ದೀರ್ಘಕಾಲದಿಂದ ವಾಸಿಮಾಡಲಾಗದ ಭಯಂಕರ ರೋಗಗಳಿಂದ ಬಾಧೆಪಡುತ್ತಿದ್ದ ವ್ಯಕ್ತಿಗಳನ್ನು ಋಷಿಗಳೂ, ಸಿದ್ಧಪುರುಷರೂ, ಮಹಿಮಾನ್ವಿತ ವ್ಯಕ್ತಿಗಳೂ ವಾಸಿಮಾಡುತ್ತಾರೆಂಬ ನಂಬಿಕೆ, ಪ್ರಪಂಚವ್ಯಾಪ್ತಿಯಾಗಿ ಎಲ್ಲಾ ಧರ್ಮಗಳಲ್ಲಿಯೂ, ಸಂಬಂಧಿಸಿದ ವ್ಯಕ್ತಿಗಳಲ್ಲಿಯೂ ಇವೆ. ಪುಣ್ಯಕ್ಷೇತ್ರಗಳನ್ನು ದರ್ಶಿಸುವುದೂ, ಮಹಿಮೆಹೊಂದಿರುವ ಕ್ಷೇತ್ರಗಳಿಗೆ ಭೇಟಿನೀಡುವುದೂ ಉತ್ತಮ ಫಲನೀಡುತ್ತದೆಂಬುದನ್ನು ಬಹುತೇಕ ಜನ ನಂಬುತ್ತಾರೆ. ಏಕೆಂದರೆ ಅವರ ನಂಬಿಕೆಯಲ್ಲಿ ತಿಳಿಯದೇ ಇರುವ ಅನಂತ ಶಕ್ತಿ ಇದೆ.

ಯಾವುದಾದರೂ ಶಾರೀರಿಕ ಅಥವಾ ಮಾನಸಿಕವಾದ ಸಮಸ್ಯೆಗಳಿಂದ ಭಾದೆಪಡುತ್ತಿರುವ ವ್ಯಕ್ತಿಗಳು ದೇವರನ್ನು ಪ್ರಾರ್ಥಿಸುವಾಗ ತಾವು ಗಾಢವಾಗಿ ನಂಬುವ ‘ಬಾಬಾ'ಗಳೂ ಅಥವಾ ಮಹಿಮೆಗಳು ಇವೆಯೆಂದು, ತಾವು ನಂಬಿದವರನ್ನು ಸಂದರ್ಶಿಸಿದಾಗ ತಮ್ಮ ಬಾಧೆಗಳ ಬಗ್ಗೆ ಹೇಳಿಕೊಳ್ಳುತ್ತಾರೆ. ಏಕೆಂದೆರೆ ಅವರು ತಮ್ಮ ಶಕ್ತಿಯಿಂದ ಬಾಧೆಗಳನ್ನು ದೂರ ಮಾಡುತ್ತಾರೆಂಬ ನಂಬಿಕೆ.

‘ದೇವರೇ ನನನ್ನು ಕ್ಯಾನ್ಸರ್ ನಿಂದ ರಕ್ಷಿಸು.....,'

‘ಸ್ವಾಮಿ, ನಿನ್ನ ಹೊರತು ನನಗಾರೂ ದಿಕ್ಕಿಲ್ಲ.....,'

‘ಈ ಹೊಟ್ಟೆನೋವು ಸಹಿಸಲಾಗುತ್ತಿಲ್ಲ.....,'

‘ನನ್ನ ಮಾನಸಿಕ ವೇದನೆಗಳನ್ನು ಕಮ್ಮಿಮಾಡು ದೇವಾ.....,'

ಯಾರು ಯಾವ ರೀತಿಯಲ್ಲಿ ಪ್ರಾರ್ಥಿಸಿದರೂ, ಬೇಡಿಕೊಂಡರೂ, ಶರಣಾಗತರಾದರೂ ಅವೆಲ್ಲದರ ಹಿಂದೆ ಇರುವ ಗಾಢವಾದ ನಂಬಿಕೆ ಏನೆಂದರೆ ಮಹನೀಯರು ತಮ್ಮ ಶಕ್ತಿಯಿಂದ ನಮ್ಮ ಬಾಧೆಗಳನ್ನು ದೂರಮಾಡುತ್ತಾರೆಂಬ ವಿಶ್ವಾಸ.

ವಾಸ್ತವವಾಗಿ ನಮ್ಮ ಜೀವನದಲ್ಲಿನ ಪ್ರತಿಕೆಲಸಕ್ಕೂ ಈ ವಿಶ್ವಾಸ, ಈ ನಂಬಿಕೆಯೇ ತಳಪಾಯ.

‘ನಿನಗೇನೂ ಪರವಾಗಿಲ್ಲ, ನಾನು ನೋಡ್ಕೋತೀನಿ......'

‘ಇಪ್ಪತ್ನಾಲ್ಕು ಗಂಟೆಗಳಲ್ಲಿ ನಿನ್ನ ಬಾಧೆಗಳೆಲ್ಲಾ ತೀರಿಹೋಗುತ್ತದೆ......'

?ನೀನು ಸಂಪೂರ್ಣ ಆರೋಗ್ಯವಂತನಾಗಿ ನೂರು ವರ್ಷ ಜೀವಿಸ್ತೀಯ......'

‘ನಿನ್ನ ಕ್ಯಾನ್ಸರ್ ಕಾಯಿಲೆ ಕಮ್ಮಿಯಾಗಿದೆ ಹೋಗು......'

ಹೀಗೆ..... ಬಾಬಾಗಳೂ, ಮಹನೀಯರೂ ತಮ್ಮ ಭಕ್ತರುಗಳಿಗೆ ಸಾಂತ್ವನ ನೀಡುತ್ತಾ, ಧೈರ್ಯ ಹೇಳುತ್ತಿರುತ್ತಾರೆ. ಇನ್ನೇನಿದೆ ಭಕ್ತರಿಗೆ? ಅದುವರಗೆ ಇದ್ದ ಭಯ ಹೋಗಿ ಸಾವಿರ ಆನೆಗಳ ಬಲ ಬಂದುಬಿಡುತ್ತದೆ. ನೂತನ ಉತ್ಸಾಹ ಉಕ್ಕಿ ಹರಿಯುವ ರೀತಿಯಲ್ಲಿ ಅವರ ಬಾಧೆಗಳೆಲ್ಲಾ ಕಮ್ಮಿಯಾಗಿಬಿಡುತ್ತದೆ, ಆರೋಗ್ಯ ಸುಧಾರಿಸುತ್ತದೆ.

ಇದು ಯಾವ ರೀತಿಯಲ್ಲಿ ಸಾಧ್ಯ? ನಮ್ಮಲ್ಲಿರುವ ‘ಹೀಲಿಂಗ್ ಶಕ್ತಿ'ಯಿಂದಲೇ ಇವೆಲ್ಲಾ ಸಾಧ್ಯವಾಗುತ್ತದೆ......

ನಮ್ಮ ನಂಬಿಕೆ ನಮ್ಮ ‘ಹೀಲಿಂಗ್ ಕೆಪಾಸಿಟಿ'ಯನ್ನು ಇನ್ನಷ್ಟು ಶಕ್ತಿಯುತವಾಗಿ ಮಾಡುತ್ತದೆ. ಸಬ್‌ಕಾನ್ಷಿಯಸ್ ಮೈಂಡ್‌ನಲ್ಲಿ ನಿಗೂಢವಾಗಿರುವ ‘ಹೀಲಿಂಗ್ ಪವರ್'ಅನ್ನು ಹೊರಗೆ ತೆಗೆದರೆ ಅದ್ಭುತಗಳು ನಡೆಯುತ್ತವೆ.'

ತಮ್ಮ ‘ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ' ಸ್ಮಾಮಿ ರಾಮ ಅವರು ಹೀಗೆ ಹೇಳುತ್ತಾರೆ, 'ಮಾನವ ಜೀವಿಯು ಅಗತ್ಯವಾದ ಎಲ್ಲಾ ಗುಣಕಾರೀ ಶಕ್ತಿಗಳಿಂದ ಸಜ್ಜಾಗಿದ್ದೂ ಅವುಗಳ ಬಳಕೆಯನ್ನು ತಿಳಿದಿಲ್ಲ. ಆಂತರ್ಯದಲ್ಲಿ ಅಡಗಿರುವ ಗುಣಕಾರೀ ಶಕ್ತಿಗಳ ಸಂಪರ್ಕವನ್ನು ಪಡೆದ ಕ್ಷಣದಲ್ಲಿಯೇ ಆತ ತನ್ನನ್ನು ತಾನು ಗುಣಪಡಿಸಿಕೊಳ್ಳಬಲ್ಲ.'

ನಮ್ಮೊಳಗಿನ 'ಧನ್ವಂತರಿ'ಯನ್ನು ಸಂಪರ್ಕಿಸುವ ಪ್ರಯತ್ನವು ಈಗಿನಿಂದಲೇ ನಮ್ಮದಾಗಲಿ.

11 comments:

 1. ನಮ್ಮ ದೇಹವನ್ನು ಸುವ್ಯವಸ್ಥಿತವಾಗಿ ನಡೆಸುವ ಶಕ್ತಿಯೇ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನೂ ಹೊಂದಿದೆ.ಇದರಲ್ಲಿ ಎರಡು ಮಾತಿಲ್ಲ.ನಾವು ವೈದ್ಯರು ಕೊಡುವ ಔಷಧಿಯೂ ದೇಹದಲ್ಲಿರುವ ಈ ಗುಣಕಾರಿ ಶಕ್ತಿಗೆ ಪೂರಕ ಮಾತ್ರ.ಮಾಹಿತಿ ಪೂರ್ವ ಲೇಖನಕ್ಕೆ ಅಭಿನಂದನೆಗಳು.ನಮಸ್ಕಾರ.

  ReplyDelete
 2. prabhamaniyavare uttama maahitiyulla lekhana."aatmashaktiginta bere kalpa vruksha ellide"..?embudu nimma lekhanada antahshakti.tunba chennagide.abhinandanegalu.

  ReplyDelete
 3. ಮನಃಶಕ್ತಿಯನ್ನು ಉದ್ಧೇಪಿಸುವ ಲೇಖನ ಕೊಟ್ಟಿದ್ದೀರಿ ಮೇಡಂ,

  ನೇಮಿಚಂದ್ರರವರ ಮಾಯಾರವರ ಲೇಖನವನ್ನು ಹುಡುಕಿ ಓದಿ ಮತ್ತೆ ಪ್ರತಿಕ್ರಯಿಸುತ್ತೇನೆ.

  ನಿಮ್ಮ ಮಾತು ನಿಜ ಮನಃಶಕ್ತಿಯಿಂದ ನಾವು ಸಾವನ್ನೇ ಎದುರಿಸಬಹುದು. ಹೀಲಿಂಗ್ ಪವರ್ ಮತ್ತು ಹೀಲಿಂಗ್ ಕೆಪಾಸಿಟಿಯನ್ನು ಮುಖ್ಯವಾಗಿ ನಗರಗಳಲ್ಲಿ ಜೀವನ ನಡೆಸುವ ನಾವು ಕಲಿಯಬೇಕಿದೆ. ಸಣ್ಣ ಪುಟ್ಟ ನೋವು ಕಾಯಿಲೆ ಖಸಾಲೆಗಳಿಗೂ ಆಸ್ಪತ್ರೆ ವೈದ್ಯ ಗುಳಿಗೆ ಅಂತ ಅಲೆಯುವ ಪ್ರವೃತ್ತಿಗೆ ಕೊನೆ ಹಾಡಬಹುದು. ಗ್ರಾಮೀಣ ಪರಿಸರದಲ್ಲಿ ಈಗಲೂ ಹೆಚ್ಚಿನ ಸಂದರ್ಭಗಳಲ್ಲಿ ಬದುಕಿನ ಮಹಾನ್ ಹೀಲರ್ ಪರಮಾತ್ಮನನ್ನೋ ಭೂತವನ್ನೋ ನಂಬಿ ನೋವನ್ನು ಗೆದ್ದು ಬಿಡುತ್ತಾರೆ.

  ನಿಮ್ಮ ಪ್ರತಿ ಲೇಖನವೂ ಸಂಗ್ರಹ ಯೋಗ್ಯ ಮೇಡಂ.

  ReplyDelete
 4. ಅತ್ಯುತ್ತಮ ಲೇಖನ. ಬಾಳಿಗೆ ಬೆಳಕು ನೀಡುವ ಇಂತಹ ಲೇಖನಗಳನ್ನು ನಮಗೆ ಕೊಡುತ್ತಲೇ ಇರಿ.

  ReplyDelete
 5. ನಿಜ, ನಂಬಿಕೆ, ವಿಶ್ವಾಸ ಮತ್ತು ಮನಸ್ಸು ಸಹಕರಿಸಿದರೆ 'ಹೀಲಿಂಗ್' ಕಷ್ಟವಲ್ಲ!

  ReplyDelete
 6. ನಾವು ಮಾಡುವ ಪ್ರತಿಯೊಂದು ಕೆಲಸವೂ ನಮ್ಮ ಮನಸ್ಥಿತಿಯ ಅಧೀನದಲ್ಲಿರುತದೆ ಮತ್ತು ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳೂ ಕೂಡ..... ಒಳ್ಳೆಯ ಲೇಖನ

  ReplyDelete
 7. ಲೇಖನ ಚನ್ನಾಗಿದೆ ,ಮನಸ್ಸಿ ಆಳದಲ್ಲಿ ಉಳಿಯುತ್ತದೆ .

  ReplyDelete
 8. ಪ್ರಭಾಮಣಿಯವರೇ ಮನಸಿಗೆ ಮತ್ತು ವಿಶ್ವಾಸಕ್ಕೆ ಅದೇ ಕಾರಣಕ್ಕೆ ಅತೀವ ಎನಿಸುವ ಶಕ್ತಿ ಇದೆ ಎನ್ನುವುದು... ನಂಬಿಕೆ ಇದೇ ಮುಖದ ಧಾರ್ಮಿಕ ರೂಪ ಎನ್ನಬಹುದೇ..? ಇದು ಸಾಧ್ಯ ಎನ್ನುವ ವಿಶ್ವಾಸ ಮನದಲ್ಲಿ ಮೂಡಿದರೆ ಅದು ಸುಲಭವಾಗುತ್ತದೆ ಎನ್ನುವುದಂತೂ ವೈದ್ಯಶಾಸ್ತ್ರವೂ ನಂಬುತ್ತೆ..ಒಳ್ಳೆ ಲೇಖನ,,,

  ReplyDelete