Sunday, January 1, 2012

ಮನದ ಅಂಗಳದಿ.........೭೩. ಗೊಂದಲ

ಎಷ್ಟೋ ವೇಳೆ ನಮ್ಮ ಮನಸ್ಸು ಗೊಂದಲದ ಗೂಡಾಗಿರುತ್ತದೆ. ಕೆಲವೊಮ್ಮೆ ಎದುರಾಗುವ ಪರಿಸ್ಥತಿಗಳಲ್ಲಿ ನಮ್ಮನ್ನು ನಾವು ಹೇಗೆ ನಿರ್ವಹಿಸಿಕೊಳ್ಳುವುದು ಎಂದು ತಿಳಿಯದಂತಾಗಿ ಗಲಿಬಿಲಿಯುಂಟಾಗುತ್ತದೆ. ಯಾವುದೇ ರಂಗಗಳಲ್ಲಿ ಗಮನಿಸಿದರೂ, ಈ ಜಗತ್ತಿನಲ್ಲಿ ಇರುವುದೇ ಎರಡು ವರ್ಗ: ಆಳುವುದು-ಆಳಲ್ಪಡುವುದು, ಮಾಲೀಕ-ಗುಲಾಮ..... ಇವೆರಡರಲ್ಲಿ ನಮ್ಮನ್ನು ಒಂದೆಡೆ ಗುರುತಿಸಿಕೊಳ್ಳುವುದು ಅನಿವಾರ್ಯವೆನಿಸುತ್ತದೆ. ಕೆಲವೊಮ್ಮೆ ಬೇರೆಬೇರೆ ಸಂದರ್ಭಗಳಲ್ಲಿ, ಅಥವಾ ಒಂದೇ ವೇದಿಕೆಯಲ್ಲಿ ಒಬ್ಬನೇ ವ್ಯಕ್ತಿ ಒಂದೇ ವೇಳೆಯಲ್ಲಿ ಎರಡೂ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸಬೇಕಾಗುತ್ತದೆ. ನನ್ನ ಕವನ ಮಧ್ಯಸ್ಥದಿಂದ ಆಯ್ದ ಭಾಗ ಹೀಗಿದೆ:

`ನಾನೀಗ ಮಧ್ಯಸ್ಥ

ಕುಕ್ಕಿಸಿಕೊಳ್ಳಬೇಕು

ಹಿರಿಕೋಳಿಗಳಿ೦ದ

ಕುಕ್ಕಲೂ ಬೇಕು

ಕಿರಿ ಕೋಳಿಗಳ!

ಕುಕ್ಕಿಸಿಕೊಳ್ಳಲಾರೆ

ಕುಕ್ಕಲಾರೆನೆ೦ದರೆ

ಈ ವ್ಯವಸ್ಥೆಯಲ್ಲಿ

ನನ್ನ ಸ್ಥಾನವೆಲ್ಲಿ?’

`Pecking order of the hen’ನಂತೆ ಬದುಕಿನ ಓಟ ಸಾಗುತ್ತಿರುತ್ತದೆ!

ನನ್ನ ಈ ಸಮಸ್ಯೆಗಳಿಗೆ ಒಂದು ಸ್ಪಷ್ಟ ರೂಪ ಹಾಗೂ ಸಾಂತ್ವನ ಓಶೋರವರ ಶೂನ್ಯ ನಾವೆ’ (ಚಾಂಗ್ ತ್ಸು ರವರ ನುಡಿಗಳ ಹಿನ್ನೆಲೆಯಲ್ಲಿ ನೀಡಿದ ಪ್ರವಚನ ಮಾಲೆ) ಎಂಬ ಪುಸ್ತಕದಲ್ಲಿ ದೊರೆಯಿತು. ಈ ಪುಸ್ತಕವನ್ನು ೨-೩ಭಾರಿ ಓದಲು ಪ್ರಾರಂಭಿಸಿ ಓದಿದ್ದು ಸರಿಯಾಗಿ ಮನಸ್ಸಿನಾಳಕ್ಕೆ ಇಳಿಯುವಲ್ಲಿ ಉಂಟಾದ ವಿಫಲತೆಯಿಂದ ಮುಂದುವರೆಸಲಾಗಿರಲಿಲ್ಲ. ಈಗಲೂ ಅಂತಹದೇ ಒಂದು ಪ್ರಯತ್ನವೆಂದುಕೊಂಡಿದ್ದೇನೆ! ಪುಸ್ತಕದ ಪ್ರಾರಂಭದಲ್ಲಿಯೇ ಇದ್ದ ಮಾನವರನ್ನು ಆಳುವವ ಗೊಂದಲದಲ್ಲಿ ಜೀವಿಸುವನು, ಮಾನವರಿಂದ ಆಳಲ್ಪಟ್ಟವ ವ್ಯಸನದಲ್ಲಿ ಜೀವಿಸುವನು, ಇದರಿಂದಾಗಿ ತಾವೋ? ಬೇರೆಯವರನ್ನು ಪ್ರಭಾವಿಸಲಿಕ್ಕಾಗಲೂ ಇಲ್ಲ, ಬೇರೆಯವರ ಪ್ರಭಾವಕ್ಕೂ ಒಳಗಾಗಲಿಲ್ಲ......ಎನ್ನುವ ಸಂದೇಶ ನನ್ನನ್ನು ಬಹಳವಾಗಿ ಆಕರ್ಷಿಸಿತು. ಇದರಲ್ಲಿ ಬರುವ ತಾವೋವ್ಯಕ್ತಿ ಯಾರು ಎನ್ನುವುದನ್ನು ಉದಾಹರಣೆಗಳೊಂದಿಗೆ ಹಂತಹಂತವಾಗಿ ಸ್ಪಷ್ಟಪಡಿಸುತ್ತಾ ಸಾಗುತ್ತಾರೆ. ಗೊಂದಲದ ಸ್ವರೂಪ, ಅದರ ನಿವಾರಣೆಗಾಗಿ ಮನಸ್ಸನ್ನು ಹೇಗೆ ಸಿದ್ಧಪಡಿಸಿಕೊಳ್ಳಬಹುದು ಎನ್ನುವುದನ್ನು ಈ ರೀತಿಯಾಗಿ ತಿಳಿಸುತ್ತಾರೆ:

ನಿಮ್ಮಲ್ಲಿ ಗೊಂದಲವಿರುವಾಗ ನೀವು ಉಳಿದವರ ನಾಯಕರಾದಲ್ಲಿ, ಉಳಿದವರನ್ನು ಆಳಿದಲ್ಲಿ , ಅವರ ಜೀವನದಲ್ಲೂ ನೀವು ಗೊಂದಲವನ್ನೇ ನಿರ್ಮಾಣ ಮಾಡುವಿರಿ. ಈ ತಂತ್ರ ನಿಮ್ಮಿಂದ ನೀವು ತಪ್ಪಿಸಿಕೊಳ್ಳುವ ದಾರಿ ಇರಬಹುದು, ಮದ್ದಿರಬಹುದು. ಆದರೆ ನಿಮ್ಮಲ್ಲಿಯ ಈ ರೋಗ ಮಾತ್ರ ಎಲ್ಲೆಡೆಯೂ ಹರಡುವುದು. ನೀವು ಮಾತ್ರ ಗೊಂದಲದಲ್ಲಿ ಜೀವಿಸುವುದಲ್ಲದೆ, ಉಳಿದವರಿಗೂ ಗೊಂದಲವನ್ನು ಹರಡುತ್ತಾ ಹೋಗುವಿರಿ. ಗೊಂದಲಗಳಿಂದ ನಿರ್ಮಾಣ ಆಗುವುದು ಗೊಂದಲಗಳೇ ವಿನಃ ಪರಿಹಾರವಲ್ಲ.

ಆದ್ದರಿಂದ ಗಮನವಿರಲಿ, ಕೃಪೆಮಾಡಿ ನೀವು ಗೊಂದಲದಲ್ಲಿ ಸಿಲುಕಿರುವಾಗ ಬೇರಾರಿಗೂ ಸಹಾಯ ಮಾಡಲು ಹಾತೊರೆಯಬೇಡಿ. ಏಕೆಂದರೆ ಆ ನಿಮ್ಮ ಸಹಾಯ ವಿಷವಾಗುವುದು. ನೀವು ಗೊಂದಲದಲ್ಲಿ ತಳಮಳದಲ್ಲಿ ನರಳುತ್ತಿರುವಾಗ ಬೇರೆಯವರೊಂದಿಗೆ ಅಂಟಿಕೊಳ್ಳದಿರಿ. ಬರಿದೇ ತೊಂದರೆಯನ್ನು ಹೆಚ್ಚಿಸುವಿರಷ್ಟೆ. ಏಕೆಂದರೆ ಈ ರೋಗ ಸಾಂಕ್ರಾಮಿಕವಾದುದು. ನೀವು ಗೊಂದಲದಲ್ಲಿ ಇರುವಾಗ ಬೇರಾರಿಗೂ ಸಲಹೆ ಕೊಡದಿರಿ. ಹಾಗೂ ನಿಮ್ಮಲ್ಲಿ ಸ್ವಲ್ಪವಾದರೂ ಸ್ಪಷ್ಟತೆ ಇದ್ದಲ್ಲಿ, ಗೊಂದಲದಲ್ಲಿರುವ ವ್ಯಕ್ತಿಗಳಿಂದ ಸಲಹೆ ಪಡೆಯಲೂ ಹೋಗಬೇಡಿ.

ಎಚ್ಚರವಿರಲಿ, ಏಕೆಂದರೆ ಗೊಂದಲದಲ್ಲಿರುವ ವ್ಯಕ್ತಿಗಳು ಸದಾ ಸಲಹೆಗಳನ್ನು ಕೊಡಲು ಇಷ್ಟಪಡುವರು. ಪುಕ್ಕಟೆಯಾಗಿ, ಧಾರಾಳವಾಗಿ ಸಲಹೆ ನೀಡುವವರು ಇವರು!

ಜಾಗೃತರಾಗಿರಿ! ಗೊಂದಲದಿಂದ ಗೊಂದಲವೇ ಉತ್ಪತ್ತಿಯಾಗುವುದು.

ನೀವು ಬೇರೆಯವರನ್ನು ಆಳಿದಲ್ಲಿ ನೀವು ಗೊಂದಲದಲ್ಲಿ ಜೀವಿಸುವಿರಿ. ಬೇರೆಯವರ ಆಳ್ವಿಕೆಗೆ ನೀವು ಒಳಗಾದಲ್ಲಿ ವ್ಯಸನದಿಂದ ಜೀವಿಸುವಿರಿ. ಏಕೆಂದರೆ ಗುಲಾಮನೆಂದೂ ಆನಂದದಿಂದ ಜೀವಿಸಲು ಸಾಧ್ಯವಿಲ್ಲ.

ನಿಶ್ಚಯವಾಗಿ, ಆಳುವ ಆಸೆ ಬರುವುದೇ ಗೊಂದಲದಿಂದ; ಮಾನವರ ಮುಖಂಡ ತಾನಾಗಬೇಕೆಂಬ ಆಸೆ ಬರುವುದೇ ಗೊಂದಲದಿಂದ. ಏಕೆಂದರೆ ಬೇರೆಯವರನ್ನು ಆಳುವಾಗ ನೀವು ನಿಮ್ಮ ಗೊಂದಲಗಳನ್ನು ಮರೆಯುವಿರಿ. ಇದೊಂದು ರೀತಿಯ ತಪ್ಪಿಸಿಕೊಳ್ಳುವಿಕೆ. ಒಂದು ಕೃತಿಮ. ವಸ್ತುತಃ ನೀವೆಲ್ಲರೂ ಈಗ ರೋಗಗ್ರಸ್ತರೇ, ಆದರೆ ಬೇರೆಯವರ ರೋಗವನ್ನು ನಿವಾರಿಸಲು ಉತ್ಸುಕರಾದಾಗ ನೀವು ನಿಮ್ಮ ರೋಗವನ್ನು ಮರೆಯಬಹುದು.ಇದಕ್ಕೆ ಜಾರ್ಜ್ ಬರ್ನಾಡ್ ಷಾ ಅವರ ಒಂದು ಉದಾಹರಣೆಯನ್ನು ನೀಡುತ್ತಾರೆ:

ಒಮ್ಮೆ ಜಾರ್ಜ್ ಬರ್ನಾಡ್ ಷಾ ತಮ್ಮ ವೈದ್ಯರಿಗೆ ದೂರವಾಣಿ ಮುಖಾಂತರ ಹೀಗೆ ಹೇಳಿದರು, ‘ನನ್ನ ಹೃದಯವೇ ನಿಂತುಹೋದಂತೆ ಅನಿಸುತ್ತಿದೆ ನನಗೆ, ಬಲು ತೊಂದರೆಯಾಗುತ್ತಿದೆ, ಕೂಡಲೇ ಬನ್ನಿ.ವೈದ್ಯರು ಆತುರಾತುರವಾಗಿ ಬಂದು ಮೂರು ಮಹಡಿ ಹತ್ತಬೇಕಾದ್ದರಿಂದ ಅಲ್ಲಿಗೆ ತಲುಪುವಷ್ಟರಲ್ಲಿ ಬೆವರು ಸುರಿಯುತ್ತಿತ್ತು. ವೈದ್ಯರು ಮನೆಯ ಒಳಗೆ ಬಂದು ಏನೂ ಹೇಳದೇ ಧೊಪ್ಪೆಂದು ಕುಸಿದು ಕುಳಿತರು. ಇದನ್ನು ನೋಡಿ ಬರ್ನಾಡ್ ಷಾ ತಮ್ಮ ಹಾಸಿಗೆಯಿಂದ ಧಡಕ್ಕನೆ ಎದ್ದು ವೈದ್ಯರನ್ನು ಉಪಚರಿಸಲು ತೊಡಗಿದರು. `ಏನಾಗುತ್ತಿದೆ?’ ಎಂದು ಕೇಳಿದರು.

ವೈದ್ಯರಾಗ, ‘ಏನೂ ಕೇಳಬೇಡಿ. ನಾನು ಇನ್ನೇನು ಸತ್ತೇ ಹೋಗುವೆನೇನೋ ಎನಿಸುತ್ತಿದೆ. ಹೃದಯಾಘಾತ ಆಗಬಹುದೆಂದು ಅನಿಸುತ್ತಿದೆ,’ ಎಂದರು.

ಇದನ್ನು ಕೇಳಿದೊಡನೆ ಷಾ ತಮ್ಮಿಂದ ಏನೇನು ಮಾಡಲು ಸಾಧ್ಯವೋ ಅವೆಲ್ಲವನ್ನೂ ಮಾಡಿದರು. ಟೀ, ಮಾತ್ರೆ ಕೊಟ್ಟು ಉಪಚರಿಸಿದರು. ಅರ್ಧ ಗಂಟೆಯ ನಂತರ ವೈದ್ಯರು ಸುಧಾರಿಸಿಕೊಂಡು, ‘ನಾನಿನ್ನು ಹೊರಡಬೇಕು, ನನ್ನ ಫೀಸನ್ನು ಕೊಡಿ,’ ಎಂದರು.

ಆಗ ಬರ್ನಾಡ್ ಷಾ, ‘ಇದೇನು ವಿಚಿತ್ರ, ನೀವು ನನಗೆ ಶುಲ್ಕ ಕೊಡಬೇಕು! ನಾನು ನಿಮ್ಮ ಶುಶ್ರೂಷೆ ಮಾಡಿರುವೆ. ಮತ್ತು ನೋಡಿದರೆ ನೀವು ನನಗೆ ಏನೂ ಮಾಡಿಲ್ಲ.ಎಂದರು.ಅದಕ್ಕುತ್ತರವಾಗಿ ವೈದ್ಯರು ಹೇಳಿದರು, `ನಿಮ್ಮನ್ನು ಈಗ ಗುಣಪಡಿಸಿದವನೇ ನಾನು. ನಾನೀಗ ಮಾಡಿದ್ದೇ ಮದ್ದು. ಆದ ಕಾರಣ ನೀವೇ ನನಗೆ ಶುಲ್ಕ ಕೊಡಬೇಕು.’

....... ನೀವು ಬೇರೆಯವರ ಬಗ್ಗೆ ಕಾಳಜಿ ವಹಿಸಿದಲ್ಲಿ, ಜನಸೇವಕರು, ಸಮಾಜ ಸೇವಕರು ಆಗಿದ್ದಲ್ಲಿ ನಿಮ್ಮಲ್ಲಿಯ ಗೊಂದಲಗಳನ್ನು ಮರೆಯಲು ಸುಲಭ ಸಾಧನ ಅವಾಗುವುವು. ಏಕೆಂದರೆ ನಿಮ್ಮಲ್ಲಿಯ ತುಮುಲ, ಸಂಕಟಗಳನ್ನು ಮರೆಯಲು ಇದು ಸಹಾಯ ಮಾಡುವುದು. ನೀವು ಪರರ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಮೈಮರೆತಿರುತ್ತೀರಿ.

ಗೊಂದಲದ ಸ್ಥಿತಿಗೆ ಪರಿಹಾರವನ್ನು ಈ ರೀತಿಯಾಗಿ ತಿಳಿಸುತ್ತಾರೆ:

ಗೊಂದಲಗಳಿಂದ ನಿರ್ಮಲನಾಗಲು, ವ್ಯಸನಗಳಿಂದ ಪಾರಾಗಲು ಇರುವ ದಾರಿ ಶೂನ್ಯತೆಯ ನೆಲದಲ್ಲಿ ತಾವೋದೊಂದಿಗೆ ಸಹಜತೆಯಿಂದ ಜೀವಿಸುವುದು.

ಶೂನ್ಯತೆ ಎಂದರೆ ಸಮಸ್ಥಿತಿ. ತಾವೋಹಗ್ಗದ ಮೇಲಿನ ನಡಿಗೆಯಲ್ಲಿನ ಮಧ್ಯ ಬಿಂದುವಿನಲ್ಲಿ ನೆಲೆಸಲು ಬಯಸುತ್ತದೆ.

ಹೊಸ ವರ್ಷದ ಈ ಶುಭ ಸಂದರ್ಭದಲ್ಲಿ ನಾವು ಗೊಂದಲ ರಹಿತವಾದ ಸುಂದರ ಜೀವನವನ್ನು ನಮ್ಮದಾಗಿಸಿಕೊಳ್ಳೋಣ. ಎಲ್ಲರಿಗೂ ೨೦೧೨ರ ಶುಭಾಶಯಗಳು.

13 comments:

  1. ಬೇರೆಯವರ ತೊಂದರೆಗಳಿಗೆ ಸಹಾಯ ಮಾಡಿ ಮತ್ತು ಬೇರೆಯವರ ಬಗ್ಗೆ ಕಾಳಜಿ ಮಾಡಿದರೆ ನಮ್ಮ ತೊಂದರೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು ಎಂಬುದು ಸತ್ಯದ ಮಾತು... ಲೇಖನ ಚೆನ್ನಾಗಿದೆ ಮೇಡಂ...

    ReplyDelete
  2. @ಗಿರೀಶ್.ಎಸ್ ರವರೆ,
    ನನ್ನ ಲೇಖನಕ್ಕೆ ಮೆಚ್ಚುಗೆಯನ್ನು ತಿಳಿಸಿ, ಶೀಘ್ರವಾಗಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ

    ReplyDelete
  3. ಗೊಂದಲದಿಂದ ಗೊಂದಲವೇ ಸೃಷ್ಠಿಯಾಗುತ್ತದೆ ಎಂಬುದು ಸತ್ಯವಾದ ಮಾತು.ಲೇಖನ ಚೆನ್ನಾಗಿದೆ.ನಿಮಗೆ ೨೦೧೨ ರ ಶುಭಾಶಯಗಳು.

    ReplyDelete
  4. ಮೇಡಮ್,
    ಹೊಸ ವರ್ಷದ ಶುಭಾಶಯಗಳು.

    ReplyDelete
  5. ಲೋಕದ ಡೊಂಕಿನ ಚಿಂತೆಯಾಕಯ್ಯಾ..??
    ನಿನ್ನ ಡೊಂಕು ನೀನು ತಿದ್ದಿಕೊಂಡರೆ ಸಾಲದೇ..?
    ಎಂಬ ಮಾತು ನೆನಪಾಯಿತು...
    ಆದ್ರೆ,, ಈ ಜಗತ್ತಿನಲ್ಲಿ ಬಿಟ್ಟಿ ಸಲಹೆಗಳನ್ನ ಕೊಡೋರು
    ತುಂಬಾನೆ ಇದಾರೆ.. "
    ಹೇಳೋದ್ ಆಚಾರ ತಿನ್ನೋದು ಬದನೆ ಕಾಯಿ"
    ಅನ್ನೋರೆ ಜಾಸ್ತಿ...
    ತಮ್ಮ ಮನಸನ್ನು ಗೊಂದಲದ ಗೂಡನ್ನಾಗಿಸಿಕೊಂಡವರೆಂದೂ..
    ನಾಯಕತ್ವಕ್ಕೆ ಸಮರ್ಥರಲ್ಲ..

    ಉತ್ತಮ ಲೇಖನ.....
    ನಿಮಗೂ ಹೊಸ ವರುಷವೆಲ್ಲಾ ಹರುಷವೇ ತುಂಬಿರಲಿ...

    ReplyDelete
  6. baraha tumba chennagide, innobbara sukhadalli namma santoshavide embantide lekhana thanks

    ReplyDelete
  7. ಹೊಸ ವರ್ಷದ ಹಾರ್ದಿಕ ಶುಭಾಶಯಗಳು...

    ನಾವು ಗೊಂದಲದಲ್ಲಿರುವಾಗ ಬೇರೆಯವರಿಗೆ ಮಾಡೋ ಸಹಾಯ ವಿಷವಾಗ ಬಹುದು.......ನಿಜವಾದ ಮಾತುಗಳು ಮೇಡಂ....ಉಪಯುಕ್ತ ಲೇಖನ....

    ReplyDelete
  8. "ಜಾಗೃತರಾಗಿರಿ! ಗೊಂದಲದಿಂದ ಗೊಂದಲವೇ ಉತ್ಪತ್ತಿಯಾಗುವುದು" ತುಂಬಾ ಚೆನ್ನಾಗಿ ಹೇಳಿದ್ದೀರಿ.. ನಿಮಗೂ ಸಹ ಹೊಸ ವರುಷದ ಶುಭಾಶಯಗಳು ಮೇಡಮ್

    ReplyDelete
  9. ಪ್ರಭಾಮಣಿ ಮೇಡಂ ಬೇರೆಯವರ ಕಷ್ಟಗಳಿಗೆ ಸ್ಪಂದಿಸೋದು ನಾವು ಮಾಡಬೇಕಾದ ಮಾನವೀಯತೆಯ ಪ್ರತಿಕ್ರಿಯೆ ಆದರೂ ಆ ರೀತಿ ಸಹಾಯ ಪಡೆದವರು ನಾನು ಇತರರನ್ನು ಮಂಗಮಾಡಬಲ್ಲೆ ಎಂದುಕೊಂಡು ಅವರ ಸಹಾಯ ಮಾಡಿದ್ದೇ ಅವರ ಮೂರ್ಖತನ ಎನ್ನುವಂತೆ ವರ್ತಿಸಿದರೆ ನಷ್ಟ .. ಅವರದ್ದೇ ಅಥವಾ ಅಂತಹ ಸ್ಥಿಯಲ್ಲಿರುವ ಇತರದ್ದು.. ಬಹುಶಃ ಅವರಲ್ಲಿ ವಾಸ್ತವಕ್ಕೂ ಒಳ್ಳೆಯ ಗುಣವಿದ್ದರೂ ನಂಬಲಾರದೇ ಸಹಾಯದಿಂದ ವಂಚಿತರಾಗಬಹುದು... ಚನ್ನಾಗಿದೆ ವಿಚಾರಾಧೀನ ಮಾಡುವ ಲೇಖನ

    ReplyDelete
  10. ಪರೋಪಕಾರಂ ಇದಂ ಶರೀರಂ ಎನ್ನುವುದನ್ನು ಮನಮುಟ್ಟುವಂತೆ ಚಿತ್ರಿಸಿದ್ದೀರಿ.

    ಹೊಸ ವರ್ಷದ ಆರಂಭಕ್ಕೆ ಉತ್ತಮ ನೀತಿಯುಕ್ತ ಕಥನ.

    ನಿಮಗೂ, ನಿಮ್ಮ ಕುಟುಮ್ಬಕ್ಕೂ ಮತ್ತು ಪ್ರತೀಕ್ಷೆಗೂ ಹೊಸ ವರ್ಷದ ಶುಭಾಶಯಗಳು.

    ReplyDelete
  11. ಪ್ರಭಾಮಣಿ ಮೇಡಂ;ಇದು ನನಗೋಸ್ಕರವೇ ಬರೆದ ಲೇಖನದಂತಿದೆ.ನಾನು ಎಷ್ಟು ಗೊಂದಲದಲ್ಲಿದ್ದೇನೆ ಎನ್ನುವುದು ನೆನ್ನೆ ನಾನು ಪೋಸ್ಟ್ ಮಾಡಿದ ಬರಹದಲ್ಲಿದೆ.ಈ ಎಲ್ಲಾ ಗೊಂದಲಗಳ ನಡುವೆ ಎಲ್ಲೋ ಆಳದಲ್ಲಿ ಶಾಂತಿಯ ಸಂಕೇತವಾದ 'ಟಾವೋ'ಇದೆ.ಅದನ್ನು ನಾವು ಕಂಡುಕೊಳ್ಳಬೇಕಾಗಿದೆ.ಅಷ್ಟೇ.ಧನ್ಯವಾದಗಳು ಮೇಡಂ.ನಮಸ್ಕಾರ.

    ReplyDelete
  12. ಗೊ೦ದಲಗಳ ಜಾತಕವನ್ನೇ ನೀಡಿದ್ದಕ್ಕೆ ಧನ್ಯವಾದಗಳು.............

    ReplyDelete
  13. Chennagide gondalagala jagattu...

    ReplyDelete