Sunday, April 29, 2012

ಮನದ ಅಂಗಳದಿ.........೯೦. ಪರಿಪೂರ್ಣತೆಯ ಪ್ರತೀಕ ‘ಕೃಷ್ಣ’

              ಎಳವೆಯಲ್ಲಿ ನಾವು ಬಹಳ ಬೇಗ ಪೂರ್ವಾಗ್ರಹ ಪೀಡಿತ ಭಾವವನ್ನು ಹೊಂದುತ್ತೇವೆ ಎನಿಸುತ್ತದೆ. ವ್ಯಕ್ತಿಗಳ ಬಗ್ಗೆ, ವಸ್ತುಗಳ ಬಗ್ಗೆ, ಕೆಲವು ಹೆಸರುಗಳ ಬಗ್ಗೆ,.........ಮುಂತಾಗಿ ನಮ್ಮ ಕಲ್ಪನೆಗಳನ್ನೇ ವಾಸ್ತವವೆಂದು ಭ್ರಮಿಸಿ ಅದೇ ಭಾವವನ್ನು ನಮ್ಮೊಳಗೆ ಜತನವಾಗಿಸಿಕೊಂಡು,ಬೆಳೆದ ನಂತರವೂ ಎಂದರೆ ಬುದ್ಧಿ ತಿಳಿದ ನಂತರವೂ ಅದೇ ಅಭಿಪ್ರಾಯಗಳಿಗೆ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. ಯಾರನ್ನೋ ನೋಡಿದಾಗ ಅಕಾರಣವಾಗಿ ಅವರ ಬಗ್ಗೆ ಅಸಮಾಧಾನ ಹೊಂದುವುದು, ಹೆಸರು ಕೇಳಿದಷ್ಟಕ್ಕೇ ಸಿಡಿಮಿಡಿಗೊಳ್ಳುವುದು ಮುಂತಾದ ನಮ್ಮ ಕೆಲವು ಭಾವಗಳು ಬುಡವಿಲ್ಲದವಾಗಿರುತ್ತವೆ. ಬಹುಶಃ ಎಳೆ ಮನಸ್ಸಿನ ಮೇಲೆ ಹಿರಿಯರಾಡಿದ ಮಾತುಗಳ ಪ್ರಭಾವವುಂಟಾಗಿ,ಸುತ್ತಿನ ಪರಿಸರದ ಆಗುಹೋಗುಗಳು ಅವಕ್ಕೆ ಇಂಬುಗೊಟ್ಟು ನಮ್ಮಲ್ಲಿ ಇಂಥಾ ಭಾವಗಳು ಉಂಟಾಗಿರಬಹುದು. ಹೀಗೇ ನನಗೆ ‘ಕೃಷ್ಣ’ ಎನ್ನುವ ಹೆಸರಿನ ಬಗ್ಗೆ ಒಂದು ನಕಾರಾತ್ಮಕ ಭಾವ ಉಂಟಾಗಿತ್ತು. ಕೃಷ್ಣ ಎಂಬ ಹೆಸರಿನವರು ಬೇಜವಾಬ್ಧಾರಿ ಸ್ವಭಾವದವರು, ಕೆಲಸದಲ್ಲಿ ಶ್ರದ್ಧೆ ಇಲ್ಲದವರು, ಒಂದು ರೀತಿ ಕಳ್ಳಬುದ್ಧಿಯವರು ಎಂದೆಲ್ಲಾ ಭಾವಿಸಿದ್ದೆ. ಚಿಕ್ಕವಳಿದ್ದಾಗ ಈ ನನ್ನ ಭಾವವನ್ನು ಪುಷ್ಟೀಕರಿಸುವಂತೆ ಕೆಲವು ಘಟನೆಗಳೂ ನಡೆದಿದ್ದವು.!
            ನಮ್ಮ ಮನೆಯಲ್ಲಿಯೇ ಹುಟ್ಟಿದ ಎರಡು ಹೋರಿ ಕರುಗಳಿದ್ದವು. ಅವುಗಳಿಗೆ ರಾಮ ಮತ್ತು ಕೃಷ್ಣ ಎಂದು ಹೆಸರಿಟ್ಟಿದ್ದರು. ಅವು ಬೆಳೆದ ನಂತರ ಅವಕ್ಕೆ ಕೃಷಿ ಕಾರ್ಯಗಳಾದ ಆರು ಉಳುವುದು, ಗಾಡಿ ಎಳೆಯುವುದು ಮುಂತಾದ ಕೆಲಸಗಳ ತರಬೇತಿ ನೀಡಲಾರಂಭಿಸಿದರು. ರಾಮ ಚೆನ್ನಾಗಿ ಕಲಿತುಬಿಟ್ಟಿತು. ಆದರೆ ಕೃಷ್ಣ ಏನಾದರೂ ಕಲಿಯಲಿಲ್ಲ. ಆರಿಗೆ ಕಟ್ಟಿದ ತಕ್ಷಣ ಕಣಿ ಹಾಕಿಕೊಂಡುಬಿಡುತಿತ್ತು! ಎಂದರೆ ನೊಗವನ್ನು ಹೊರದೇ ತಪ್ಪಿಸಿಕೊಳ್ಳುವುದು. ಆಳುಮಕ್ಕಳು ಹೊಡೆದು ಕಟ್ಟಲು ಪ್ರಯತ್ನಿಸಿದರೆ ಅಲ್ಲೇ ಮಲಗಿಬಿಡುತ್ತಿತ್ತು!ಇವುಗಳನ್ನು ಮುಂದೆ ಜೋಡಿ ಮಾಡಬಹುದೆಂದು ಹಿರಿಯರು ಅಂದುಕೊಂಡದ್ದು ಸುಳ್ಳಾಯಿತು!
         ನಮ್ಮ ಪಕ್ಕದ ಹಳ್ಳಿಯಲ್ಲಿ ರಾಮ-ಕೃಷ್ಣ ಎಂಬ ಅಣ್ಣ-ತಮ್ಮಂದಿರಿದ್ದರು.ರಾಮ ಸಜ್ಜನನಾಗಿದ್ದರೆ, ಕೃಷ್ಣ ಪೋಲಿ ಅಲೆಯುವವನಾಗಿದ್ದ!
         ‘ಕೃಷ್ಣ’ನ ಬಗ್ಗೆ ಋಣಾತ್ಮಕ ಭಾವವುಂಟಾಗಲು ಹಾಗೂ ಈ ಎಲ್ಲಾ ಅವಾಂತರಗಳಿಗೆ ಇನ್ನೂ ಮುಖ್ಯ ಕಾರಣವೆಂದರೆ ಪ್ರಚಲಿತವಿರುವ ಸಾಂಪ್ರದಾಯಿಕ ಹಾಡುಗಳು, ಕಥೆಗಳ ಮೂಲಕ ನಾನು ಕೇಳಿ ತಿಳಿದಿದ್ದಂತೆ ಕೃಷ್ಣನ ಬಾಲಲೀಲೆಗಳನ್ನು ಅವನ ಕಳ್ಳತನಕ್ಕೇ ಒತ್ತುಕೊಟ್ಟು ಚಿತ್ರಿಸಿರುವುದು ಹಾಗೂ ಯೌವನದಲ್ಲಿ ಅವನೊಬ್ಬ ಸ್ತ್ರೀಲೋಲ ಎನ್ನುವಂತೆ ಬಿಂಭಿಸಿರುವುದು. ಕೃಷ್ಣನ ವ್ಯಕ್ತಿತ್ವದ ಔನತ್ಯವನ್ನು ಅರಿಯಬೇಕಾದರೆ ಶರೀರಭಾವದಿಂದ ಆತ್ಮಭಾವಕ್ಕೆ ಏರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಫಲರಾದ ಅನೇಕ ಮಹಾತ್ಮರು ನಮ್ಮ ಕಣ್ಣು ತೆರೆಸುವ ಪ್ರಯತ್ನವನ್ನೂ ಮಾಡಿದ್ದಾರೆ. ಅಂಥಾ ಒಂದು ಪ್ರಯತ್ನ ಓಶೋರವರ `Krishna: The Man and His Philosophy’ ಯಲ್ಲಿಯೂ ಇದೆ. ಅದರ ಮೊದಲ ಅಧ್ಯಾಯದ ಮೊದಲ ಪ್ರಶ್ನೆ ಹೀಗಿದೆ:
          ನಮ್ಮ ಕಾಲಕ್ಕೂ ಪ್ರಸ್ತುತವೆನಿಸುವಂತೆ ಮಾಡುವ ಕೃಷ್ಣನಲ್ಲಿರುವ ವಿಶಿಷ್ಟ ಗುಣಗಳು ಯಾವುವು? ನಮಗೆ ಆತನ ಮಹತ್ವವೇನು?
          ಇದಕ್ಕೆ ಓಶೋರವರ ಉತ್ತರದ ಸಂಕ್ಷಿಪ್ತ ರೂಪ:
          ಕೃಷ್ಣ ಹೋಲಿಕೆಗೇ ನಿಲುಕದವನು. ಆತ ಅನನ್ಯ. ಆತನ ಜೀವನ ಪುರಾತನ ಭೂತಕಾಲದಲ್ಲಿ ಘಟಿಸಿದ್ದರೂ ಆತ ಭವಿಷ್ಯತ್ ಕಾಲಕ್ಕೂ ಸೇರ್ಪಡೆಯಾಗುವುದರಲ್ಲಿಯೇ ಆತನ ಅನನ್ಯತೆಯಿರುವುದು. ಕೃಷ್ಣನ ಸಮಕಾಲೀನತೆ ಹೊಂದಲು ಮನುಷ್ಯರಾದ ನಾವು ಇನ್ನೂ ಆ ಎತ್ತರಕ್ಕೆ ಬೆಳೆಯಬೇಕಾಗಿದೆ. ಮಾನವರ ಅರ್ಥಗ್ರಹಿಕೆಗೆ ಆತ ಅತೀತನಾಗಿದ್ದಾನೆ. ಆತ ಇನ್ನೂ ನಮ್ಮನ್ನು ಗೊಂದಲಗೊಳಿಸುತ್ತಿದ್ದಾನೆ. ಭವಿಷ್ಯದಲ್ಲಿ ಯಾವಾಗಲಾದರೂ ನಾವು ಆತನನ್ನು ಅರ್ಥಮಾಡಿಕೊಳ್ಳಲು ಮತ್ತು ಆತನ ಮಹತ್ವವನ್ನು ಪ್ರಶಂಸಿಸಲು ಸಮರ್ಥರಾಗುತ್ತೇವೆ.
            ........... ಎಲ್ಲಾ ಧರ್ಮಗಳೂ ಜೀವನವನ್ನು ಎರಡು ಭಾಗಗಳಾಗಿ ವಿಂಗಡಿಸಿ, ಅವುಗಳಲ್ಲಿ ಒಂದು ಭಾಗವನ್ನು ಸ್ವೀಕರಿಸಿ ಮತ್ತೊಂದನ್ನು ನಿರಾಕರಿಸಿವೆ. ಕೃಷ್ಣ ಮಾತ್ರ ಜೀವನವನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದಾನೆ. ಆದ್ದರಿಂದಲೇ ಭಾರತವು ಕೃಷ್ಣನನ್ನು ದೇವಾಂಶದ ಪರಿಪೂರ್ಣ ಅವತಾರ ಎಂದು ಸ್ವೀಕರಿಸಿದೆ. ಕೃಷ್ಣನನ್ನು ಒಂದು ಪರಿಪೂರ್ಣ ದೇವರು ಎನ್ನಲು ಆತ ಜೀವನದಲ್ಲಿರುವ ಎಲ್ಲ ಅಂಶಗಳನ್ನೂ ಸ್ವೀಕರಿಸಿ ತನ್ನದಾಗಿಸಿಕೊಂಡಿರುವುದೇ ಕಾರಣವಾಗಿದೆ......... ಕೃಷ್ಣ ಮಾತ್ರ ದೇಹವನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದಾನೆ. ಸದಾ ಮುಗುಳ್ನಗುತ್ತಾ ಹಸನ್ಮುಖಿಯಾಗಿರುವ ಪರಿಪೂರ್ಣ ಕೃಷ್ಣನನ್ನು ಸ್ವೀಕರಿಸಲು, ಅರ್ಥಮಾಡಿಕೊಳ್ಳಲು ನಗುನಗುತ್ತಾ ಸಂತಸದಿಂದಿರುವ ಒಂದು ಮಾನವಕುಲವೇ ಹುಟ್ಟಿ ಬರಬೇಕಾಗಿದೆ!
         ........... ಮನುಷ್ಯನ ಮನಸ್ಸು ಯಾವಾಗಲೂ ವೈರುಧ್ಯಗಳ ನಡುವೆ ಒಂದನ್ನು ಸ್ವೀಕರಿಸಲು ಸಿದ್ಧವಾಗಿರುತ್ತದೆ. ಆದ್ದರಿಂದಲೇ ಮನುಷ್ಯ ಸಾಮಾನ್ಯವಾಗಿ ನರಕವನ್ನು ತಿರಸ್ಕರಿಸಿ, ಸ್ವರ್ಗವನ್ನು ಸ್ವೀಕರಿಸುತ್ತಾನೆ. ಶಾಂತಿಯನ್ನು ಸ್ವೀಕರಿಸಿ ಅಶಾಂತಿಯನ್ನು ತಿರಸ್ಕರಿಸುತ್ತಾನೆ. ಒಳಿತನ್ನು ಕಾಪಾಡಿ ಕೆಟ್ಟದ್ದನ್ನು ನಾಶಪಡಿಸಲು ಪ್ರಯತ್ನಿಸುತ್ತಾನೆ. ಬೆಳಕಿಗಾಗಿ ಕಾತರಿಸುತ್ತಾ ಕತ್ತಲನ್ನು ವರ್ಜಿಸುತ್ತಾನೆ. ಸುಖಕ್ಕೆ ಹಂಬಲಿಸಿ ದುಃಖವನ್ನು ಹತ್ತಿಕ್ಕುತ್ತಾನೆ. ಅವನ ಮನಸ್ಸು ಯಾವಾಗಲೂ ವಾಸ್ತವವನ್ನು ಎರಡು ಭಾಗಗಳಾಗಿ ವಿಂಗಡಿಸುತ್ತದೆ. ಅವುಗಳಲ್ಲಿ ಒಂದನ್ನು ಸ್ವೀಕರಿಸಿ ಮತ್ತೊಂದನ್ನು ನಿರಾಕರಿಸುತ್ತದೆ. ಈ ಆಯ್ಕೆಯಿಂದ ಇಬ್ಬಗೆಯುಂಟಾಗುತ್ತದೆ. ಇದು ದ್ವಂದ್ವವನ್ನೂ, ನೋವನ್ನೂ ತರುತ್ತದೆ.
        ಕೃಷ್ಣನು ವೈರುಧ್ಯಗಳನ್ನು ಒಟ್ಟಾಗಿ ಸ್ವೀಕರಿಸುವ ಪ್ರತೀಕವಾಗಿದ್ದಾನೆ. ಆದ್ದರಿಂದ ಅವನು ಮಾತ್ರ ಪರಿಪೂರ್ಣನಾಗುತ್ತಾನೆ. ಆಯ್ಕೆ ಮಾಡಿಕೊಳ್ಳುವವರು ಯಾವಾಗಲೂ ಅಪರಿಪೂರ್ಣರಾಗಿಯೇ ಉಳಿಯುತ್ತಾರೆ. ಆದ್ದರಿಂದ ಜೀವನದಲ್ಲಿ ಎಲ್ಲವನ್ನೂ ಸ್ವೀಕರಿಸಿ ಪರಿಪೂರ್ಣತೆಯನ್ನು ಸಾಧಿಸಿದಾಗ ಬದುಕಿನ ಔನತ್ಯಕ್ಕೆ ಏರಬಹುದು ಎಂದು ಸಾರುವ ಕೃಷ್ಣನು ಎಂದೆಂದಿಗೂ ಪ್ರಸ್ತುತನಾಗುತ್ತಾನೆ.

5 comments:

  1. ಕೃಷ್ಣನ ಬಗೆಗಿನ ವಿಶ್ನೇಷಣೆ ಚೆನ್ನಾಗಿ ಮೂಡಿ ಬಂದಿದೆ. ಅದೇ ರೀತಿ ಅವನ ಅನನ್ಯತೆ ಸರ್ವಕಾಲಿಕವಾದುದು.ಅದರಲ್ಲೂ ಸಾಹಿತ್ಯಕೆ ಇನ್ನಷ್ಟು.

    ReplyDelete
  2. ಮೇಡಂ;ಕೃಷ್ಣಣ ಬಗ್ಗೆ ಒಳ್ಳೆಯ ಲೇಖನ.ಕೃಷ್ಣ ಎಂದರೆ'ಆಕರ್ಷಣೆ'.ಅವನದು ಅಂತಹ ಪರಿಪೂರ್ಣ ವ್ಯಕ್ತಿತ್ವ.ಅವನು ನಮಗೆ ಜೀವನ ಧರ್ಮ ಯೋಗವನ್ನು ಬೋಧಿಸಿದ ಯೋಗಾಚಾರ್ಯ.ಒಶೋರವರ 'ಕೃಷ್ಣ'ಪುಸ್ತಕ ನನ್ನಲ್ಲಿದೆ.ತಂದು ಬಹಳ ದಿನಗಳಾದವು.ನಿಮ್ಮ ಲೇಖನ ಓದಿದ ಮೇಲೆ ಮತ್ತೊಮ್ಮೆ ಓದಬೇಕಿನಿಸಿದೆ.
    ಧನ್ಯವಾದಗಳು.ನಮಸ್ಕಾರ.

    ReplyDelete
  3. ಕೃಷ್ಣ ನ ರೂಪ ಚೆನ್ನಾಗಿ ಬಯಲಾಗಿದೆ...... :)

    ReplyDelete
  4. ಕೆಲವು ಬಾರಿ ಮನಸ್ಸು ಹೀಗೆ ಒಗ್ಗಿಕೊಳ್ಳುತ್ತದೆ. ಕೆಲ ಮುಖಗಳೂ ಹಾಗೆ ಎಷ್ಟು ಆಪ್ತವಾದರೂ ಆಪ್ತವಾಗುವುದೇ ಇಲ್ಲ!

    ನಮ್ಮೆಲ್ಲರ ಮನಸ್ಸಿನ ಬರಹ ಇದು.

    ReplyDelete