Friday, December 10, 2010

ಮನದ ಅಂಗಳದಿ..................೨೧. ಅಹಂಕಾರ

ಬುದ್ದಿಯ ಅಹಂಕಾರವೇ ಭುವನದ ಎಲ್ಲಾ ಸಮಸ್ಯೆಗಳಿಗೂ ತಾಯಿಬೇರು.
*ಶ್ರೀ ಅರವಿಂದರು
‘ಅಹಂಕಾರ’ವೆನ್ನುವುದು ಮನುಷ್ಯನನ್ನು ಹೇಗೆ, ಎಲ್ಲಿ, ಯಾವ ಸಂದರ್ಭದಲ್ಲಿ ಆವರಿಸಿಕೊಳ್ಳುತ್ತದೆ ಎನ್ನುವುದನ್ನು ತಿಳಿಯುವುದು ಕಷ್ಟಸಾಧ್ಯವಾಗಿದೆ. ನಮ್ಮ ಸಮೀಪ ಜೀವಿಗಳಾದ ಪ್ರಾಣಿಸಂಕುಲವನ್ನು ಆಕ್ರಮಿಸದ ಈ ‘ಅಹಂಕಾರ’ವು ಮನುಜರ ಮೇಲೆ ಸವಾರಿ ಮಾಡಲು ತುದಿಗಾಲಿನಲ್ಲಿ ನಿಂತಿರುತ್ತದೇನೋ ಎನಿಸುತ್ತದೆ. ನಾನು ಗಮನಿಸಿದಂತೆ ತಮ್ಮ ಜೀವಿತದ ಪ್ರಾರಂಭದಲ್ಲಿ ಕೀಳರಿಮೆಯಿಂದ ನಲುಗುತ್ತಿರುವವರು ಕ್ರಮೇಣ ತಮ್ಮ ಕಾರ್ಯಗಳನ್ನೆಲ್ಲಾ ಸಮರ್ಥಿಸಿಕೊಳ್ಳುತ್ತಾ, ತಮ್ಮ ಅಲ್ಪ ಸಾಧನೆಗಳನ್ನೂ ಪೀನ ಮಸೂರದಲ್ಲಿ ವೀಕ್ಷಿಸುತ್ತಾ, ತಮ್ಮನ್ನೇ ತಾವು ಬೆನ್ನು ತಟ್ಟಿಕೊಳ್ಳುತ್ತಾ..........ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವ ಬದಲು ಅಹಂಕಾರದತ್ತ ಹೆಜ್ಜೆ ಇಡಲಾರಂಭಿಸಿಬಿಡುತ್ತಾರೆ. ಕೆಲವರಂತೂ ಚಿಕ್ಕಂದಿನಿಂದಲೇ ಗರ್ವಿಷ್ಟ ರೀತಿನೀತಿಗಳನ್ನು ಮೈಗೂಡಿಸಿಕೊಂಡಿರುತ್ತಾರೆ.
ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ, ‘ನಮ್ಮ ವ್ಯಕ್ತಿತ್ವದಲ್ಲಿ ನಡೆಯುವ ಎಲ್ಲಾ ಕ್ರಿಯೆಗಳ ಹಿಂದೆಯೂ ‘ನಾನು ಮಾಡುತ್ತಿದ್ದೇನೆ’ ಎಂಬ ಪ್ರಜ್ಞೆಯೇ ಅಹಂಕಾರ. ನಾನು ಊಟಮಾಡುತ್ತೇನೆ, ನಾನು ನೋಡುತ್ತೇನೆ, ನಾನು ಮಾತನಾಡುತ್ತೇನೆ, ನಾನು ಚಿಂತಿಸುತ್ತೇನೆ, ನಾನು ಸುಖವಾಗಿದ್ದೇನೆ, ಇತ್ಯಾದಿ ನಮ್ಮ ಎಲ್ಲಾ ಕ್ರಿಯೆಗಳನ್ನೂ ಒಗ್ಗೂಡಿಸಿ ನಮ್ಮ ವ್ಯಕ್ತಿತ್ವಕ್ಕೆ ಒಂದು ಸಮಗ್ರತೆಯನ್ನು ನೀಡಿ ವ್ಯಕ್ತಿಭಾವಕ್ಕೆ ಕಾರಣವಾಗಿದೆ. ಈ ಅಹಂಕಾರವು ಸರಿಯಾಗಿ ಕೆಲಸ ಮಾಡದೇ ಇದ್ದರೆ ವ್ಯಕ್ತಿತ್ವದ ಸಮತೋಲನ ತಪ್ಪುತ್ತದೆ.’ ಅಹಂಕಾರವು ಮನಸ್ಸಿನ ನಾಲ್ಕು ಬಗೆಯ ಕ್ರಿಯೆಗಳಾದ ಚತುರ್ವಿಧ ಅಂತಃಕರಣ ವೃತ್ತಿಗಳಲ್ಲಿ ಒಂದಾಗಿದೆ.(ಮನಸ್, ಚಿತ್ತ, ಬುದ್ಧಿ ಮತ್ತು ಅಹಂಕಾರ)
‘ನಾನು’ ಎನ್ನುವುದು ಒಂದು ಹಂತದವರೆಗೂ ಸಹನೀಯವಾಗಿರುತ್ತದೆ. ಆದರೆ ಎಲ್ಲವೂ ನನ್ನಿಂದಲೇ ಆಗುತ್ತಿದೆ, ನಾನೇ ಎಲ್ಲವನ್ನೂ ಮಾಡುತ್ತಿದ್ದೇನೆ,.....ಎನ್ನುವಲ್ಲಿನ ‘ನಾನು’ ದುರಹಂಕಾರ ಸೂಚಕವಾಗುತ್ತದೆ. ಅಂದಮೇಲೆ ಒಳ್ಳೆಯ ‘ಅಹಂಕಾರ’ ಎನ್ನುವುದೂ ಇದೆಯೆ?
‘ನಾನು’, ‘ನಾನು’
ಎನ್ನುವವರೇ ತುಂಬಿದ್ದಾರೆ
ಇಲ್ಲಿ ಎಲ್ಲಾ,
‘ನಾನು’ಎನ್ನದೇ ಮಾರ್ಗವೇ ಇಲ್ಲ
ನನ್ನ ನಾ ಉಳಿಸಿಕೊಳ್ಳಲು!
‘ನಾನು’ ಎನ್ನವವರೇ ತುಂಬಿರುವೆಡೆ, ‘ನಾನು’ ಎನ್ನದೇ ಬದುಕುವುದಾದರೂ ಹೇಗೆ? ಎನ್ನುವುದು ಒಮ್ಮೆ ನನ್ನ ಪ್ರಶ್ನೆಯಾಗಿತ್ತು! ಅದನ್ನೇ ಅಸ್ತಿತ್ವದ ಪ್ರಶ್ನೆ ಎಂದೇ ಭಾವಿಸಿದ್ದೆ! ಈಗ ‘ನಾನು’ ಎನ್ನುವವರು ತಮ್ಮ ಅಹಮಿಕೆಯನ್ನು ಸ್ಥಾಪಿಸಲು ನಡೆಸುವ ಹೋರಾಟ, ಅನುಭವಿಸುವ ಒತ್ತಡ.......ಇವುಗಳನ್ನೆಲ್ಲಾ ನೋಡುವಾಗ ಕನಿಕರವೆನಿಸುತ್ತದೆ. ಅಹಂಕಾರಿಯಾದವರು ತಮ್ಮ ಹೆಗಲುಗಳ ಮೇಲೆ ಯಾರೋ ಕುಳಿತು, ಜುಟ್ಟನ್ನು ಹಿಡಿದುಕೊಂಡು ತಮ್ಮನ್ನು ನಿರ್ದೇಶಿಸುತ್ತಿರುವರೇನೋ ಎನ್ನುವಂತೆ ವರ್ತಿಸುತ್ತಿರುತ್ತಾರೆ. ತಾವು ಇರುವ ಗುಂಪಿನಲ್ಲಿ ತಮ್ಮನ್ನೇ ಎಲ್ಲರೂ ಗಮನಿಸುತ್ತಿರುವರೇನೋ ಎನ್ನುವ ಭಾವದಲ್ಲಿ ತಮ್ಮ ಗತ್ತನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಸರಳ, ಸುಂದರ ನಗೆ ಅವರಿಂದ ದೂರವಾಗಿರುತ್ತದೆ.
‘ಬಿಗಿದ ಮೊಗದಲಿ
ನಗೆಯ ಅಂತ್ಯ ಸಂಸ್ಕಾರ
ಅಂದವನೆ ಕಬಳಿಸುವ
ಅಹಂಕಾರ!’
ಪ್ರಭುಶಂಕರ ಅವರು ತಮ್ಮ `ಖಲೀಲ್ ಗಿಬ್ರಾನ್’ ಕೃತಿಯಲ್ಲಿ ಹೀಗೆ ಹೇಳುತ್ತಾರೆ, ‘ಇದನ್ನು ನಾನು ಮಾಡಿದ್ದೇನೆ’ ಎನ್ನುವ ಅಹಂಕಾರ ಎಷ್ಟು ಬಲವಾದದ್ದು ಎಂದರೆ ಯಾವ ಕಾಲದಲ್ಲೂ ಯಾರಿಗೂ ಅದನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಅಹಂಕಾರವನ್ನು ಅದರ ಸರಿಯಾದ ಹಿನ್ನೆಲೆಯಲ್ಲಿರಿಸಿ ಬಯಲಿಗೆಳೆದು ಹಾಸ್ಯಮಾಡಿದ್ದಾನೆ ಗಿಬ್ರಾನ್, ‘ಸೇತುವೆಯನ್ನು ಕಟ್ಟುವವರು’ ಎಂಬುದರಲ್ಲಿ,
‘ಅಸ್ಸಿ ನದಿ ಸಮುದ್ರವನ್ನು ಸೇರಲು ಹೋಗುವ ಸ್ಥಳದಲ್ಲಿ, ನಗರದ ಎರಡು ಭಾಗಗಳನ್ನು ಹತ್ತಿರ ತರುವುದಕ್ಕೆ ಎಂದು ಒಂದು ಸೇತುವೆ ಕಟ್ಟಿದರು. ಅದಕ್ಕೆ ಬೇಕಾದ ದೊಡ್ಡ ದೊಡ್ಡ ಕಲ್ಲುಗಳನ್ನು ಬೆಟ್ಟದಿಂದ ಹೇಸರಗತ್ತೆಗಳ ಮೇಲೆ ಹೊರಿಸಿ ತರಿಸಿದರು.
ಸೇತುವೆ ಮುಗಿದ ಮೇಲೆ ಅರಾಬಿಕ್ ಮತ್ತು ಅರಾಮೆಯಿಕ್ ಭಾಷೆಗಳಲ್ಲಿ ಒಂದು ಕಂಬದ ಮೇಲೆ ಕೆತ್ತಿದರು: ‘ಎರಡನೇ ಆಂಟಿಯೋರಸ್ ದೊರೆ ಈ ಸೇತುವೆಯನ್ನು ಕಟ್ಟಿಸಿದ.’
ಒಂದು ಸಂಜೆ ಹುಚ್ಚನಂತೆ ತೋರುವ ಒಬ್ಬ ಯುವಕ ಆ ಕಂಬದ ಮೇಲೆ ಇದ್ದಲಿನ ಚೂರಿನಿಂದ ಬರೆದ: ‘ಈ ಸೇತುವೆಯ ಕಲ್ಲುಗಳನ್ನು ಬೆಟ್ಟದಿಂದ ಹೇಸರಗತ್ತೆಗಳು ತಂದವು. ಈ ಸೇತುವೆಯ ಮೇಲೆ ಓಡಾಡುವಾಗ ನೀವು ಈ ಸೇತುವೆಯನ್ನು ಕಟ್ಟಿದ ಆಂಟಿಯಾಕ್ನ ಹೇಸರಗತ್ತೆಗಳ ಬೆನ್ನಿನ ಮೇಲೆ ಸವಾರಿ ಮಾಡುತ್ತೀರಿ.’ ಅದನ್ನು ನೋಡಿದ ಕೆಲವರು ನಕ್ಕರು, ಕೆಲವರು ಆಶ್ಚರ್ಯ ಪಟ್ಟರು. ಕೆಲವರು ಹೇಳಿದರು, ‘ಇದನ್ನು ಮಾಡಿದವರು ಯಾರು ಎಂದು ನಮಗೆ ಗೊತ್ತು. ಆತನಿಗೆ ಸ್ವಲ್ಪ ಹುಚ್ಚಲ್ಲವೆ?’
ಆದರೆ ಒಂದು ಹೇಸರಗತ್ತೆ ನಗುತ್ತಾ ಮತ್ತೊಂದಕ್ಕೆ ಹೇಳಿತು: ‘ಹೌದು ಆ ಕಲ್ಲುಗಳನ್ನು ಹೊತ್ತವರು ನಾವು. ನಿನಗೆ ನೆನಪಿಲ್ಲವೆ? ಆದರೂ ಈವತ್ತಿಗೂ ಎಲ್ಲರೂ ಹೇಳುವುದು ಸೇತುವೆ ಕಟ್ಟಿದವನು ದೊರೆ ಆಂಟಿಯೋರಸ್ ಎಂದೇ!
ನಾವು ಮಾಡಿದೆವೆಂದು ಭ್ರಮಿಸುವ ಮಹತ್ಕಾರ್ಯಕ್ಕಾಗಿ ನಮ್ಮ ಹೆಸರು ಚಿರಸ್ಥಾಯಿಯಾಗಬೇಕೆಂದು ಬಯಸುವ ನಾವು ಇದರಿಂದ ಕಲಿಯಬೇಕಾಗಿರುವುದು ಬಹಳಷ್ಟಿದೆ. ಸದಾ ನಮ್ಮ ಹೆಗಲೇರಲು ತವಕಿಸುತ್ತಿರುವ ಅಹಂಕಾರವನ್ನು ಬಳಿಗೆ ಸುಳಿಯಲೂ ಬಿಡದಂತೆ ಜಾಗರೂಕರಾಗಿ ಆತ್ಮವಿಶ್ವಾಸದಿಂದ ಬದುಕನ್ನು ಸಾರ್ಥಕಗೊಳಿಸಿಕೊಳ್ಳೋಣ. ಅಲ್ಲವೆ?

13 comments:

  1. ಯಾರೂ ತಮಗೆ ಅಹಂಕಾರವಿದೆಯೆಂದು ಒಪ್ಪಿಕೊಳ್ಳುವುದಿಲ್ಲ!ಅಹಂಕಾರವಿಲ್ಲದಿದ್ದರೆ ಜಗತ್ತಿನಲ್ಲಿ ಇಷ್ಟೆಲ್ಲಾ ನೋವು,ನಿರಾಸೆ,ಸ್ಪರ್ಧೆ,ಈರ್ಷೆ,ಜಗಳ,ಕದನ ,ಯಾವುದೂ ಇಲ್ಲದೆ ಎಲ್ಲರೂ ನಿರಾಳವಾಗಿ,ನಿಶ್ಚಿಂತೆಯಿಂದ ಇರಬಹುದಿತ್ತಲ್ಲವೇ?ಸುಂದರ ಬರಹ.ಧನ್ಯವಾದಗಳು.

    ReplyDelete
  2. @ ಕೃಷ್ಣಮೂರ್ತಿಯವರೇ,
    ಬಹಳ ಚೆನ್ನಾಗಿ ವಿಶ್ಲೇಷಿಸಿ ಪ್ರತಿಕ್ರಿಯಿಸಿದ್ದೀರಿ ಸರ್, ಧನ್ಯವಾದಗಳು.

    ReplyDelete
  3. ಮೇಡಮ್,
    ಶ್ರೇಷ್ಠ ವ್ಯಕ್ತಿಗಳ ಉತ್ತಮ ವಿಚಾರಗಳನ್ನು ಲಲಿತವಾದ ಶೈಲಿಯಲ್ಲಿ ನಮಗೆ ತಿಳಿಸುತ್ತಿದ್ದೀರಿ. ನಿಮಗೆ ಧನ್ಯವಾದಗಳು.

    ReplyDelete
  4. @ ಸುನಾಥ್ ರವರೇ,
    ನನ್ನ ಬರಹದ ಶೈಲಿಯನ್ನು ಮೆಚ್ಚಿ ಪ್ರೋತ್ಸಾಹಿಸಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಸರ್, ಬರುತ್ತಿರಿ.

    ReplyDelete
  5. ಪ್ರಭಾಮಣಿ ನಾಗರಾಜ್ ಮೇಡಂ ನಮಗೆ ಅಹಂಕಾರ ಇಲ್ಲ ಅಂತಾ ಹೇಳಿಕೊಳ್ಳೋದೇ ನಮ್ಮ ಅಹಂಕಾರ ಅಲ್ವೇ. ನಮ್ಮ ಸಮೀಪ ಜೀವಿಗಳಾದ ಪ್ರಾಣಿಸಂಕುಲವನ್ನು ಆಕ್ರಮಿಸದ ಈ ‘ಅಹಂಕಾರ’ವು ಮನುಜರ ಮೇಲೆ ಸವಾರಿ ಮಾಡಲು ತುದಿಗಾಲಿನಲ್ಲಿ ನಿಂತಿರುತ್ತದೇನೋ ಎನಿಸುತ್ತದೆ.ಎಂಬ ನಿಮ್ಮ ಮಾತುಗಳು ಅರ್ಥ ಪೂರಿತ ವಾಗಿವೆ ಇದನ್ನು ಅರ್ಥ ಮಾಡಿಕೊಳ್ಳದಿರುವುದೇ ನಮ್ಮ ಅಹಂಕಾರ ಆಲ್ವಾ ??? ನಿಮ್ಮ ಲೇಖನ ಕಣ್ಣು ತೆರೆಸುವಂತಿದೆ ಅಂತಾ ಒಪ್ಪಿಕೊಳ್ಳದಿದ್ದರೆ, ನನ್ನ ಅಹಂಕಾರ ಜಾಸ್ತಿಯಾಗಿದೆ ಅಂತಾ ಅನೀಸುತ್ತೆ !!

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  6. @ ಬಾಲುರವರೇ,
    ಅಹ೦ಕಾರದ ಸ೦ಕೀರ್ಣತೆಯನ್ನು ಅರ್ಥವತ್ತಾಗಿ ವಿಶ್ಲೇಷಿಸಿದ್ದೀರಿ! ಪ್ರತಿಕ್ರಯಿಸಿದ್ದಕ್ಕಾಗಿ ಧನ್ಯವಾದಗಳು.

    ReplyDelete
  7. ಪ್ರಭಾಮಣಿ ಮೇಡಂ, ಇವತ್ತು ಕೊಳಲು ಬ್ಲಾಗಿಗೆ ಇದೇ ಥರದ ಪ್ರತಿಕ್ರಿಯೆ ಹಾಕಿದ್ದೆ: ಕೆಲವರು ಬದುಕಿದ್ದೇ ಬೇರೆಯವರಿಗೆ ಪಾಠ. ನಮ್ಮೊಳಗಿನ ಅಹಂಕಾರ ನಮ್ಮ ವಿಶಾಲ ಅರಿವಿಗೆ ಧಕ್ಕೆ ತರುತ್ತದೆ. ಬೇರೆಯವರು ನಮ್ಮ ತಪ್ಪುಗಳನ್ನು ತಿದ್ದಿದಾಗ ನಮ್ಮ ಅಹಂ ಅದಕ್ಕೆ ಆಸ್ಪದ ಕೊಡುವುದಿಲ್ಲ. ಈ ಅಹಂ ಕಳೆದುಕೊಳ್ಳುವುದು ಸುಲಭದ ಕೆಲಸವಲ್ಲ. ಒಂದೊಮ್ಮೆ ಅಹಂ ಕಳೆದುಬಿಟ್ಟರೆ ಷಡ್ವರ್ಗಗಳಲ್ಲಿ ಅರ್ಧ ಗೆದ್ದಂತೇ ಆಗುತ್ತದೆ. ವಿಪರ್ಯಾಸವೆಂದರೆ ಸುಮಾರಾದ ಸನ್ಯಾಸಿಗಳಿಗೂ ಅಹಮಿಕೆ ಹೋಗಿರುವುದಿಲ್ಲ !ಲೇಖನ ಅರಿವು ಮೂಡಿಸುವಂತಿದೆ, ಧನ್ಯವಾದಗಳು ತಮಗೆ

    ReplyDelete
  8. ಮನೋಬುದ್ದಿಚಿತ್ತಾಹಂಕಾರಗಳ ಬಗೆಗೆ ಸುಲಲಿತವಾಗಿ ಮನದಟ್ಟು ಮಾಡುತ್ತಿದ್ದೀರಿ. ಚೆನ್ನಾಗಿದೆ.

    ReplyDelete
  9. ''ತಮ್ಮ ಅಲ್ಪ ಸಾಧನೆಗಳನ್ನೂ ಪೀನ ಮಸೂರದಲ್ಲಿ ವೀಕ್ಷಿಸುತ್ತಾ, ''

    eshtondu nija...!!

    ReplyDelete
  10. @ ವಿ. ಆರ್. ಭಟ್ ರವರೇ,
    ಬಹಳ ದಿನಗಳ ನ೦ತರ ನನ್ನ ಬ್ಲಾಗ್ ಗೆ ಬ೦ದು ಪ್ರೋತ್ಸಾಹಕರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಅಹ೦ಕಾರದ ಬಗ್ಗೆ ವಿಶಿಷ್ಟ ಬೆಳಕನ್ನು ಚೆಲ್ಲಿದ್ದೀರಿ. ಬರುತ್ತಿರಿ.

    ReplyDelete
  11. @ ಸುಭ್ರಮಣ್ಯರವರೇ,
    ನಿಮ್ಮ ಆತ್ಮೀಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

    ReplyDelete
  12. @ ವಿಜಯಶ್ರೀ ಯವರೇ,
    'ನಾನು ಹೆಚ್ಚು'ಎನ್ನುವ ಮೇಲರಿಮೆಯೇ ಅಹ೦ಕಾರದ ಮೂಲ..ನಿಮ್ಮ ಸ್ನೇಹ ಪೂರ್ವಕ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

    ReplyDelete
  13. ಪ್ರಭಾಮಣಿ ಯವರೇ ,ಅಹಂಕಾರದ bagge bahala chennaagi tilisikottiddeera .dhanyavaadagalu

    ReplyDelete