Tuesday, April 12, 2011

ಮನದ ಅಂಗಳದಿ.........೩೫. ನಂಬಿಕೆ.

ನಾವು ‘ನಂಬಿಕೆ'ಯ ಆಧಾರದ ಮೇಲೆಯೇ ಈ ಜೀವನ ನಡೆಯುತ್ತಿದೆ ಎನ್ನುವ ತಿಳುವಳಿಕೆಯಲ್ಲಿದ್ದೇವೆ. ಸ್ನೇಹ-ಸಂಬಂಧಗಳು ಸುಸ್ಥಿತಿಯಲ್ಲಿರಲು ಪರಸ್ಪರ ನಂಬಿಕೆ ಇರಬೇಕು. ಜೀವನದಲ್ಲಿ ಶಾಂತಿ-ನೆಮ್ಮದಿ ಇರಬೇಕಾದರೆ ದೇವರಲ್ಲಿ ನಂಬಿಕೆ ಇರಬೇಕು ಎಂಬ ನಂಬಿಕೆಗಳನ್ನು ಹೊಂದಿದ್ದೇವೆ. ‘ನಂಬಿ ಕೆಟ್ಟವರಿಲ್ಲವೋ ರಂಗಯ್ಯನ.....' ಎಂದು ದಾಸರೂ ಹಾಡಿದ್ದಾರೆ. ಈ ‘ನಂಬಿಕೆ?ಯ ಬಗ್ಗೆ ಜಿಡ್ಡು ಕೃಷ್ಣಮೂರ್ತಿಯವರು ಏನನ್ನು ಹೇಳಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳೋಣ:

‘ಬದುಕನ್ನು ಅರ್ಥಮಾಡಿಕೊಳ್ಳಲು ಬಯಸುವವರಿಗೆ, ನಿಜವಾಗಲೂ ಯಾವ ನಂಬಿಕೆಗಳೂ ಬೇಕಾಗಿಲ್ಲ. ಪ್ರೀತಿಸುವಾತನಲ್ಲಿ ನಂಬಿಕೆ ಇರುವುದಿಲ್ಲ. ಪ್ರೀತಿ ಮಾತ್ರ ಇರುತ್ತದೆ. ಯಾರು ಬುದ್ಧಿಗೆ ಆಹಾರವಾಗಿರುತ್ತಾರೋ ಅವರಿಗೆ ಮಾತ್ರ ನಂಬಿಕೆಗಳು ಬೇಕು. ಬುದ್ಧಿ ಯಾವಾಗಲೂ ಕ್ಷೇಮವನ್ನು, ರಕ್ಷಣೆಯನ್ನು ಬಯಸುತ್ತಿರುತ್ತದೆ. ಆದ್ದರಿಂದ ತಾನು ಆಶ್ರಯ ಪಡೆಯಬಹುದಾದ ಆದರ್ಶ, ನಂಬಿಕೆ, ವಿಚಾರ, ಐಡಿಯಾಗಳನ್ನು ಕಟ್ಟಿಕೊಳ್ಳುತ್ತದೆ.'

‘ನಾವು ನಂಬುವುದು ಏನನ್ನು?' ಎನ್ನುವ ವಿಚಾರವಾಗಿ ಹೀಗೆ ತಿಳಿಸುತ್ತಾರೆ:
‘ನಂಬಿಕೆಯಿಂದ ಉತ್ಸಾಹ ಹುಟ್ಟುತ್ತದೆಯೇ? ನಂಬಿಕೆ ಇಲ್ಲದೆ ಉತ್ಸಾಹ ಇರಬಲ್ಲದೇ?..........ನಂಬಿಕೆಯನ್ನು ಆಧರಿಸಿರದ, ಸ್ವಯಂಪೋಷಕವಾದ ಚೈತನ್ಯ, ಶಕ್ತಿ ಒಂದಿದೆಯೇ? ಮತ್ತೊಂದು ಪ್ರಶ್ನೆಯೆಂದರೆ ನಮಗೆ ಯಾವುದೇ ಒಂದು ಬಗೆಯ ನಂಬಿಕೆ ಬೇಕೆ? ಯಾಕೆ ಬೇಕು? ಎಂಬ ಪ್ರಶ್ನೆ! ಬಿಸಿಲು ಇದೆ, ಬೆಟ್ಟ ಇದೆ, ನದಿ ಇದೆ ಎಂಬ ನಂಬಿಕೆ ನಮಗೆ ಅಗತ್ಯವಿಲ್ಲ. ಅವು ಇವೆ. ಜೀವನವು ನಿರಂತರವಾದ ಸಂಘರ್ಷ, ವೇದನೆ, ನರಳಾಟ, ಆಸೆ ಎಂಬ ನಂಬಿಕೆ ಬೇಕಾಗಿಲ್ಲ. ಅದು ಹಾಗೆ ಇದೆ. ಇರುವುದನ್ನು ಬಿಟ್ಟು ಇಲ್ಲದ ಅಸತ್ಯಕ್ಕೆ ಪಲಾಯನ ಮಾಡಲು ನಮಗೆ ನಂಬಿಕೆ ಬೇಕಾಗುತ್ತದೆ.'

‘ನಂಬಿಕೆಯ ತಳಮಳ'ವನ್ನು ವಿವರಿಸುತ್ತಾ ಈ ರೀತಿಯಾಗಿ ಹೇಳುತ್ತಾರೆ:
‘ನಿಮ್ಮ ಧರ್ಮ, ದೇವರು ಎಲ್ಲವೂ ಸತ್ಯದಿಂದ ತಪ್ಪಿಸಿಕೊಳ್ಳಲೆಂದೇ ಇರುವ ಮಾರ್ಗಗಳು. ಕ್ರೌರ್ಯದಿಂದ, ಅಪ್ರಾಮಾಣಿಕತೆಯಿಂದ, ತಂತ್ರಗಾರಿಕೆಯಿಂದ, ಶೋಷಣೆಯಿಂದ ಹಣವನ್ನು ಕೂಡಿಹಾಕಿಕೊಳ್ಳುವ ಶ್ರೀಮಂತ ದೇವರನ್ನು ನಂಬುತ್ತಾನೆ. ನೀವೂ ದೇವರನ್ನು ನಂಬುತ್ತೀರಿ. ನಿಮ್ಮಲ್ಲೂ ತಂತ್ರಗಾರಿಕೆ, ಕ್ರೌರ್ಯ, ಅಸೂಯೆಗಳಿವೆ.......ನಿಮ್ಮ ಸಂಬಂಧಗಳ ಸ್ವರೂಪವನ್ನು ಅರಿಯದಿದ್ದರೆ ನಿಮ್ಮ ಮನಸ್ಸಿನಲ್ಲಿ ಗೊಂದಲವಿರುತ್ತದೆ. ನಂಬಿಕೆಯ ತಳಮಳಕ್ಕೆ ಸಿಕ್ಕಿ ತೊಳಲುವ ಮನಸ್ಸು ಸತ್ಯವನ್ನು ಕಾಣಲಾರದು.'

‘ನಂಬಿಕೆಯಾಚೆಗೆ' ವಿಮರ್ಷಿಸುತ್ತಾ.....
‘ಬದುಕು ವಿಕಾರವಾಗಿದೆ, ನೋವಿನಿಂದ ತುಂಬಿದೆ, ದುಃಖಮಯವಾಗಿದೆ ಎಂದು ನಮಗೆ ಗೊತ್ತು. ಇದೆಲ್ಲಾ ಏಕೆ ಹೀಗೆ ಎಂದು ವಿವರಿಸಿಕೊಳ್ಳುವುದಕ್ಕೆ ಒಂದು ಸಿದ್ಧಾಂತ, ಊಹೆ, ತತ್ವ ಏನಾದರೂ ಸಿಕ್ಕರೆ ನಮಗೆ ಸಮಾಧಾನವೆನಿಸುತ್ತದೆ. ಹಾಗಾಗಿ ನಾವು ವಿವರಣೆಯ ಪದಗಳಲ್ಲಿ, ಊಹೆ, ಸಿದ್ಧಾಂತ, ತತ್ವಗಳಲ್ಲಿ ಸಿಲುಕಿಕೊಳ್ಳುತ್ತೇವೆ. ಕ್ರಮೇಣ ನಂಬಿಕೆಗಳು ಆಳವಾಗಿ ಬೇರು ಬಿಟ್ಟುಕೊಳ್ಳುತ್ತದೆ. ನಂಬಿಕೆಗಳು ಅಲುಗಾಡಿಸಲಾಗದಷ್ಟು ಬಲವಾಗುತ್ತವೆ. ಏಕೆಂದರೆ ನಂಬಿಕೆಗಳ ಹಿಂದೆ, ತತ್ವ, ಸಿದ್ಧಾಂತಗಳ ಹಿಂದೆ, ಅಪರಿಚಿತವಾದದ್ದರ ಬಗೆಗಿನ ಭಯವಿದೆ. ನಂಬಿಕೆಗಳು ಗಟ್ಟಿಯಾದಷ್ಟೂ ಸಿದ್ಧಾಂತಗಳೂ ಗಟ್ಟಿಯಾಗುತ್ತವೆ.
ವಿವಿಧ ಧರ್ಮಗಳ ನಂಬಿಕೆಗಳನ್ನು ಪರಿಶೀಲಿಸಿದಾಗ ಅವು ಜನರನ್ನು ಬೇರೆಬೇರೆ ಮಾಡುತ್ತವೆ ಎಂದು ತಿಳಿಯುತ್ತದೆ. ಒಂದೊಂದು ಸಿದ್ಧಾಂತದ ಹಿಂದೆಯೂ, ಒಂದೊಂದು ನಂಬಿಕೆಯ ಹಿಂದೆಯೂ ಆಚರಣೆಗಳ ಒಂದು ಸರಣಿಯೇ ಇರುತ್ತದೆ. ಮನುಷ್ಯರನ್ನು ಒಗ್ಗೂಡಿಸುವ ಮತ್ತು ಬೇರ್ಪಡಿಸುವ ಒತ್ತಾಯಗಳಿರುತ್ತವೆ. ಸತ್ಯವಾದದ್ದು ಏನು ಎಂದು ಹುಡುಕಲು ಹೊರಟು, ನೋವು, ನರಳಾಟ, ಹೋರಾಟಗಳ ಅರ್ಥವೇನು ಎಂದು ತಿಳಿಯಲು ಹೊರಟು ನಂಬಿಕೆ, ಆಚರಣೆ, ಸಿದ್ಧಾಂತಗಳಲ್ಲಿ ಸಿಕ್ಕುಬೀಳುತ್ತೇವೆ.
ನಂಬಿಕೆ ಬ್ರಷ್ಟವಾದದ್ದು. ಏಕೆಂದರೆ ನಂಬಿಕೆ ಮತ್ತು ನೀತಿಯ ಹಿನ್ನೆಲೆಯಲ್ಲಿ ನಾನು ಎಂಬುದು ಸದಾ ಬೆಳೆಯುತ್ತಲೇ ಇರುವ, ಪ್ರಬಲವಾಗುತ್ತಿರುವ ನಾನು ಎಂಬುದು ಇರುತ್ತದೆ. ದೇವರನ್ನು ನಂಬುವುದು, ಮತ್ತೇನನ್ನೋ ನಂಬುವುದು ಎಂದರೆ ಧರ್ಮ ಎಂದು ಪರಿಗಣಿಸುತ್ತೇವೆ. ನಂಬಿಕೆ ಇಲ್ಲದವರನ್ನು ನಾಸ್ತಿಕರೆಂದು ಕರೆದು ಸಮಾಜ ತಿರಸ್ಕಾರ ತೋರುತ್ತದೆ. ಒಂದು ಸಮಾಜ ದೇವರನ್ನು ನಂಬುವವರನ್ನು ತಿರಸ್ಕರಿಸಿದರೆ ಇನ್ನೊಂದು ಸಮಾಜ ದೇವರನ್ನು ನಂಬದೇ ಇರುವವರನ್ನು ತಿರಸ್ಕರಿಸುತ್ತದೆ. ನಿಜವಾಗಿ ಎರಡೂ ಸಮಾಜಗಳೂ ಒಂದೇ. ಧರ್ಮ ನಂಬಿಕೆಯ ವಿಚಾರವಾಗುತ್ತದೆ. ನಂಬಿಕೆ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ನಂಬಿಕೆಯ ಪ್ರಭಾವಕ್ಕೆ ಸಿಕ್ಕಿದ ಮನಸ್ಸು ಸ್ವತಂತ್ರವಾಗಿರಲು ಸಾಧ್ಯವಾಗುವುದಿಲ್ಲ. ನಂಬಿಕೆಯ ಮೂಲಕ ಅಲ್ಲ. ಸ್ವಾತಂತ್ರ್ಯವಿದ್ದಾಗ ಮಾತ್ರ ಸತ್ಯವೆಂದರೇನು, ದೇವರು ಯಾರು ಎಂದು ಕಾಣಲು ಸಾಧ್ಯ. ಏಕೆಂದರೆ ನಿಮ್ಮಲ್ಲಿರುವ ನಂಬಿಕೆಯು ನೀವು ಏನನ್ನು ನಂಬಿದ್ದೀರೋ ಅದನ್ನೇ, ಏನನ್ನು ಆಲೋಚಿಸುತ್ತೀರೋ ಅದನ್ನೇ ದೇವರೆಂದು, ಸತ್ಯವೆಂದು ಬಿಂಬಿಸುತ್ತಿರುತ್ತದೆ. ಅದನ್ನೇ ನೀವು ಸತ್ಯವೆಂದುಕೊಳ್ಳುತ್ತಿರುತ್ತೀರಿ.'

‘ನಂಬಿಕೆಯ ತೆರೆ'ಯ ಕುರಿತು ಹೀಗೆ ವಿಷದಪಡಿಸುತ್ತಾರೆ:
‘ಕೆಲವರು ದೇವರನ್ನು ನಂಬುತ್ತಾರೆ, ಕೆಲವರು ನಂಬುವುದಿಲ್ಲ. ನಂಬಿಕೆಯೇ ಜನರನ್ನು ಪರಸ್ಪರ ದೂರ ಮಾಡಿದೆ. ಜಗತ್ತಿನಾದ್ಯಂತ ನಂಬಿಕೆಗಳು ಹಿಂದೂ, ಕ್ರಿಶ್ಚಿಯನ್, ಬೌದ್ಧ.....ಎಂದು ವ್ಯವಸ್ಥೆಗೊಂಡಿದೆ. ಜನರ ನಡುವೆ ಭೇದ ಕಲ್ಪಿಸಿವೆ. ನಮ್ಮಲ್ಲಿ ಗೊಂದಲವಿದೆ. ನಂಬಿಕೆಯ ಮುಖಾಂತರ ಗೊಂದಲವನ್ನು ಪರಿಹರಿಸಿಕೊಂಡು ಮನಸ್ಸನ್ನು ತಿಳಿಯಾಗಿಸಿಕೊಳ್ಳಬಹುದು ಎಂದುಕೊಂಡಿದ್ದೇವೆ. ಗೊಂದಲದ ಮೇಲೆ ನಂಬಿಕೆಯನ್ನು ಹೇರಿಕೊಂಡಿದ್ದೇವೆ. ಆದರೆ ನಂಬಿಕೆಯೆಂಬುದು ಗೊಂದಲವೆಂಬ ಸತ್ಯವನ್ನು ಎದುರಿಸಲಾರದೇ ಮಾಡುವ ಪಲಾಯನ. ಸತ್ಯವನ್ನು ಕಣ್ಣಾರೆ ಕಂಡು ಅರ್ಥಮಾಡಿಕೊಳ್ಳುವ ಬದಲಾಗಿ ನಮ್ಮಲ್ಲಿರುವ ಸತ್ಯದಿಂದ ಪಾರಾಗುವ ದಾರಿಯೇ ನಂಬಿಕೆ. ಗೊಂದಲವನ್ನು ಅರ್ಥಮಾಡಿಕೊಳ್ಳುವುದಕ್ಕೆ ನಂಬಿಕೆ ಬೇಡ. ನಮಗೂ ನಮ್ಮ ಸಮಸ್ಯೆಗಳಿಗೂ ನಡುವೆ ನಂಬಿಕೆ ಅಡ್ಡ ತೆರೆಯಾಗಿ ಇರುತ್ತದೆ.......'

‘ಬದುಕನ್ನು ಹೊಸತಾಗಿ ಕಾಣುವುದು' ಹೇಗೆಂಬುದನ್ನು ಈ ರೀತಿಯಾಗಿ ಸ್ಪಷ್ಟಪಡಿಸುತ್ತಾರೆ:
‘......ಗತಕಾಲದ ರೂಢಿಗಳಿಂದ ಹುಟ್ಟಿಕೊಂಡ ಅಭ್ಯಾಸಗತ ಪ್ರತಿಕ್ರಿಯೆಗಳಿಲ್ಲದೇ, ಕ್ಷಣಕ್ಷಣ, ಅನುಕ್ಷಣ ಬದುಕನ್ನು ಕಾಣುವ ಸಾಮರ್ಥ್ಯ ಬಂದಾಗ ನಮಗೂ ಏನಿದೆಯೋ ಅದಕ್ಕೂ ನಡುವೆ ಸಂಚಿತ ನೆನಪುಗಳ ತೆರೆ, ನಂಬಿಕೆಗಳ ತೆರೆ ಇರುವುದಿಲ್ಲ. ಆಗ ಸತ್ಯ ಕಾಣುತ್ತದೆ.'

‘ನಂಬಿಕೆ'ಯ ಕುರಿತಂತೆ ತಮ್ಮದೇ ಪ್ರಖರ ವಿಚಾರಸರಣಿಯಲ್ಲಿ ನಾವು ಯಾವುದನ್ನು ನಂಬಿಕೆ ಎಂದುಕೊಂಡಿದ್ದೇವೆಯೋ ಆ ನಂಬಿಕೆಗಳನ್ನೆಲ್ಲಾ ಬುಡಮೇಲು ಮಾಡಿ ಸತ್ಯದ ದರ್ಶನ ಮಾಡಿಸುವ ಪ್ರಯತ್ನವನ್ನು ನಡೆಸಿದ್ದಾರೆ ಜಿಡ್ಡು ಕೃಷ್ಣಮೂರ್ತಿಯವರು. ಅದನ್ನು ಅರ್ಥಮಾಡಿಕೊಂಡು ಅನ್ವಯಿಸಿಕೊಳ್ಳುವ ಪ್ರಬುದ್ಧತೆ ನಮ್ಮದಾಗಲಿ.

6 comments:

  1. ಮೇಡಂ;ಜಿಡ್ಡು ಅವರ ವಿಚಾರಗಳು ತರ್ಕಕ್ಕೆ,ವೈಚಾರಿಕ ದೃಷ್ಟಿಗೆ ಸರಿ ಅನಿಸಬಹುದು.ಆದರೆ ಕೋಟಿಗಟ್ಟಲೆ ಜನ ಒಂದು ದೃಢವಾದ ನಂಬಿಕೆಯ ಆಸರೆ ಪಡೆದು ನೆಮ್ಮದಿಯ ಜೀವನ ನಡೆಸುತ್ತಿರುವಾಗ,ಅವರ ನಂಬಿಕೆಯ ತಳಹದಿಯನ್ನು ಸಡಿಲಿಸುವುದು ಸರಿಯೇ ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತದೆ.ಒಂದು ತಾಯಿತ ಕಟ್ಟಿಕೊಂಡರೆ ನನ್ನ ಕಷ್ಟಗಳೆಲ್ಲಾ ಪರಿಹಾರವಾಗುತ್ತವೆ ಎಂದು ಬಲವಾಗಿ ನಂಬಿದವನಿಗೆ ಅವನ ನಂಬಿಕೆಯೇ ನೂರಾನೆ ಬಲ ಕೊಡುತ್ತದೆ.ಬಾಳಿಗೊಂದು ನಂಬಿಕೆ ಬೇಕು ಎನ್ನುವುದು ನನ್ನ ಅಭಿಮತ.

    ReplyDelete
  2. ನಿಮ್ಮ ಲೇಖನ ನಂಬಿಕೆಯ ಬಗ್ಗೆ ನಾನು ಅಂದುಕೊಂಡಿರುವುದನ್ನು ಹುಸಿಯಾಗಿಸಿತು...ವಿಚಾರ ಮಾಡುವಂತ ಅನೇಕ ವಿಷಯಗಳನ್ನು ತಿಳಿಸಿದ್ದೀರಿ...ಉಪಯುಕ್ತ ಲೇಖನ...

    ReplyDelete
  3. ನಿಮ್ಮ ಮಾತು ನಿಜ ಕೃಷ್ಣಮೂರ್ತಿ ಸರ್, ನ೦ಬಿಕೆಗಳಿ೦ದಲೇ ಬದುಕನ್ನು ಕಟ್ಟಿಕೊ೦ಡವರು ನಾವು. ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು.

    ReplyDelete
  4. @ಅಶೋಕ್ ರವರೆ,
    ಜೆ.ಕೆ.ಯವರ ಚಿ೦ತನೆಗಳೇ ಹಾಗೆ. ನಮ್ಮ ಆಲೋಚನೆಗಳ ದಿಕ್ಕನ್ನೇ ಬದಲಿಸಿಬಿಡುತ್ತವೆ. ಧನಾತ್ಮಕವಾಗಿ! ಪ್ರತಿಕ್ರಿಯೆ ನೀಡಿ ಹುರಿದು೦ಬಿಸಿದ್ದಕ್ಕಾಗಿ ವ೦ದನೆಗಳು.

    ReplyDelete
  5. @ಸತೀಶ್ ರವರೆ ,
    ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete