Sunday, November 6, 2011

ಮನದ ಅಂಗಳದಿ.........೬೫. ನೆನೆಯೋಣ ಈ ಹಿರಿಚೇತನಗಳ...

ನವೆಂಬರ್ ತಿಂಗಳು ಬಂತೆಂದರೆ ಎಲ್ಲೆಡೆಯಲ್ಲಿಯೂ ಕನ್ನಡ ರಾಜ್ಯೋತ್ಸವದ ಸಂಭ್ರಮ ಸಡಗರಗಳನ್ನು ಕಾಣುತ್ತೇವೆ. ತಿಂಗಳ ಮೊದಲ ದಿನದಿಂದ ಕಡೆಯ ದಿನದವರೆಗೂ ಒಂದಲ್ಲಾ ಒಂದುಕಡೆ ಕನ್ನಡ ರಾಜ್ಯೋತ್ಸವಕ್ಕೆ ಸಂಬಂಧಿಸಿದ ಸಮಾರಂಭ ನಡೆಯುತ್ತಿರುತ್ತದೆ. ನವೆಂಬರ್ ತಿಂಗಳಿನಲ್ಲಿ ಮಾತ್ರಕನ್ನಡಾ, ಕನ್ನಡಾಎಂದು ಕೂಗುತ್ತಾರೆ, ನಂತರ ಕನ್ನಡದ ಬಗ್ಗೆ ಸೊಲ್ಲೆತ್ತುವುದಿಲ್ಲ, ಎಂಬ ಆರೋಪಗಳೂ ಕೇಳಿಬರುತ್ತವೆ. ಯಾವುದು ಏನೇ ಇರಲಿ, ನಾವಾಡುವ, ನಮ್ಮ ಮನೆ ಮಾತಾಗಿರುವ, ನಮ್ಮ ಆಡಳಿತ ಭಾಷೆಯಾಗಿರುವ ಕನ್ನಡವನ್ನು ಶ್ರೀಮಂತಗೊಳಿಸಿದ ಅನೇಕ ಮಹನೀಯರಿಗೆ ವಂದಿಸುತ್ತಾ ಅವರಲ್ಲಿ ತಮ್ಮ ಆರ್ಥಿಕ ಸ್ಥಿತಿಯನ್ನು ಪರಿಗಣಿಸದೇ ಆಂತರ್ಯದ ಕರೆಗೆ ಓಗೊಡುತ್ತಾ ಧೀಮಂತ ಜೀವನ ನಡೆಸಿದ ಕೆಲವರ ಜೀವನದ ಕೆಲಕ್ಷಣಗಳನ್ನು ನೆನಪುಮಾಡಿಕೊಳ್ಳೋಣ:

ದ. ರಾ. ಬೇಂದ್ರೆಯವರೆಂದರೆ ಮಾಸ್ತಿಯವರಿಗೆ ಪಂಚಪ್ರಾಣ. ಅವರಿಗೂ ಅಷ್ಟೆ. ಇವರೆಂದರೆ ತುಂಬಾ ಗೌರವ ಮತ್ತು ಅಭಿಮಾನ. ಮಾಸ್ತಿಯವರು ಬೇಂದ್ರೆಯವರಿಗೆ ಹಿರಿಯಣ್ಣನಿದ್ದಂತೆ. ಈ ಇಬ್ಬರ ನಡುವೆ ಎಲ್ಲಿಲ್ಲದ ಅಂಟುನಂಟು, ಸ್ನೇಹಸಲುಗೆ. ಧಾರವಾಡದ ಆಕಾಶವಾಣಿಯಲ್ಲಿ ಮಾಸ್ತಿಯವರ ಮಗಳು ನಿಲಯದ ಕಲಾವಿದೆಯಾಗಿ ಸೇವೆಯಲ್ಲಿದ್ದರು. ಈಕೆಯನ್ನು ನೋಡುವುದಕ್ಕಾಗಿ ಮಾಸ್ತಿಯವರು ಆಗಾಗ ಧಾರವಾಡಕ್ಕೆ ಹೋಗುತ್ತಿದ್ದರು. ಅಲ್ಲದೇ ಸುವಿಖ್ಯಾತ ಸಾಹಿತಿಗಳನೇಕರಿಗೆ ತವರಿನಂತಿದ್ದ ಧಾರವಾಡದಲ್ಲಿ ಕಾಲಕಳೆಯುವುದೆಂದರೆ ಮಾಸ್ತಿಯವರಿಗೂ ಬಲು ಮೋಜು.

ಬೇಂದ್ರೆಯವರು ಆಗ ಆರ್ಥಿಕವಾಗಿ ದಾರುಣಮಯ ದಿನಗಳನ್ನು ದೂಡುತ್ತಿದ್ದರು. ಈ ವಿಚಾರ ಮಾಸ್ತಿಯವರಿಗೆ ತಿಳಿಯಿತು. ಆ ಸಮಯದಲ್ಲೊಮ್ಮೆ ಮಗಳ ಮನೆಗೆ ಹೋಗಿದ್ದ ಮಾಸ್ತಿಯವರು ಹಾಗೆಯೇ ಮಾಮೂಲು ಎಂಬಂತೆ ಬೇಂದ್ರೆಯವರನ್ನೂ ಭೇಟಿಯಾದರು. ಅದೂ ಇದೂ ಮಾತನಾಡಿದ ನಂತರ ಕೊನೆಯಲ್ಲಿ ಮೃದುವಾದ ಮೆಲುದನಿಯಲ್ಲಿ, ‘ಬೇಂದ್ರೆಯವರೇ ನೀವೀಗ ತುಸು ಕಷ್ಟದಲ್ಲಿರುವಿರೆಂದು ತಿಳಿಯಿತು. ಇರಲಿ, ಈ ಕಷ್ಟ ಬಹುಕಾಲದವರೆಗೇನಿರುವುದಿಲ್ಲ. ಒಳ್ಳೆಯ ಸುಖದ ಕಾಲವೂ ಸದ್ಯದಲ್ಲೇ ಬರುತ್ತದೆ. ರಾತ್ರಿ ಕಳೆದು ಹಗಲಾಗುವಂತೆ, ಕತ್ತಲೆ ಕಳೆದು ಬೆಳಕಾಗುವಂತೆ, ಮಳೆ ಕಳೆದು ಮುಗಿಲು ತಿಳಿಯಾಗುವಂತೆ ದುಃಖ ಕಳೆದು ಸುಖ ತಟ್ಟಿಯೇ ತಟ್ಟುತ್ತದೆ. ಆ ಕಾಲ ಪ್ರಾಪ್ತವಾಗುವವರೆಗೂ ನಾನು ನಿಮಗೆ ಪ್ರತಿ ತಿಂಗಳೂ ೧೦೦ರೂ.ವನ್ನು ಮನಿಯಾರ್ಡರ್ ಮೂಲಕ ಕಳಿಸುತ್ತೇನೆ. ದಯಮಾಡಿ ಮುಜುಗರಗೊಳ್ಳದೇ ಸ್ವೀಕರಿಸಬೇಕು,’ ಎನ್ನಲು ಬೇಂದ್ರೆಯವರು ಸಂಕೋಚದಿಂದಲೇ, ‘ಬ್ಯಾಡ್ರಿ ಮಾಸ್ತಿಯವರೇ ಬ್ಯಾಡ್ರೀ, ದಯವಿಟ್ಟು ರೊಕ್ಕ ಕಳಿಸಬ್ಯಾಡ್ರೀ. ಈ ಬೇಂದ್ರೆಗೆ ಬೇಸರ ಬರ್‍ತತಿ, ಬ್ಯಾಡ್ರೀ,’ ಎಂದರು, ತುಸು ನೊಂದ ದನಿಯಲ್ಲಿ.

ಮಾಸ್ತಿಯವರು ಸುಮ್ಮನಾಗಲಿಲ್ಲ. ತುಸು ಬಿರುಸಿನ ಸ್ವರದಲ್ಲೇ ಬೇಂದ್ರೆಯವರ ಭುಜ ಹಿಡಿದು, ‘ಸ್ವಾಮಿ ಕವಿವರ್ಯರೆ, ನಿಮಗೊಂದು ಮುಖ್ಯಮಾತು. ನಾನು ಹಣ ಕಳುಹಿಸುವುದು ನಿಮಗಲ್ಲ, ನಿಮ್ಮಲ್ಲಿರುವ ಶಾರದಾ ಮಾತೆಗೆ. ಆಕೆಯ ಕ್ಷೇಮ ನನಗೆ ಮುಖ್ಯ. ಆಕೆಯ ಅಸ್ತಿತ್ವ ನಲುಗದಂತೆ ನಡೆದುಕೊಳ್ಳಬೇಕಾದ ಜವಾಬ್ಧಾರಿ ನಿಮ್ಮದು. ಆದ್ದರಿಂದ ಮತ್ತೇನೂ ಮಾತನಾಡದೇ ನಾನು ಕಳುಹಿಸುವ ಹಣವನ್ನು ದಯಮಾಡಿ ಸ್ವೀಕರಿಸಿ,’ ಎಂದು ಹೇಳಿ ಎದ್ದ ಮಾಸ್ತಿಯವರು ಬೇಂದ್ರೆಯವರ ಮರುಮಾತಿಗೂ ಕಿವಿಗೊಡದೇ ತಮ್ಮ ಮಗಳ ಮನೆಯತ್ತ ನಡೆದರು!

ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸುತ್ತಿದ್ದರೂ, ಏತರಿಂದಲೂ ಲಾಭಗಳಿಸುವುದು ಮಹಾಪಾಪವೆಂದೇ ನಿರಂತರ ನಂಬಿದ್ದ ಡಿ.ವಿ.ಜಿ.ಅವರ ಆರ್ಥಿಕ ಸ್ಥಿತಿಗತಿಯೂ ಅಷ್ಟಕ್ಕಷ್ಟೆ ಎನ್ನುವಂತಿತ್ತು. ಅಧ್ವಾನವೆಂದರೂ ಆದೀತು. ಬದುಕಿನುದ್ದಕ್ಕೂ ಬಡತನ, ಬವಣೆ ತಪ್ಪಿದ್ದೇ ಇಲ್ಲ. ಆದರೆ ಎಂಥಾ ಕಷ್ಟನಷ್ಟಗಳ ಪರಿಸ್ಥಿತಿಯಲ್ಲೂ ಅವುಗಳ ಅನಿಷ್ಟದ ಛಾಯೆ ತಮ್ಮ ಪತಿಯ ಮೇಲೆ ಬೀಳದಂತೆ ಜಾಗೃತರಾಗಿರುತ್ತಿದ್ದರು ಅವರ ಮಡದಿ ಭಾಗೀರತಮ್ಮನವರು. ಮನೆಮರ್ಯಾದೆಯ ಬಗ್ಗೆ ಆಕೆಗಿದ್ದ ಕಾಳಜಿ, ಪತಿಯ ಸ್ವಾಭಿಮಾನದ ಬಗ್ಗೆ ಆಕೆಗಿದ್ದ ಅಭಿಮಾನವನ್ನು ಕುರಿತ ಒಂದು ಪ್ರಸಂಗವನ್ನು ಎಸ್. ಆರ್. ರಾಮಸ್ವಾಮಿಯವರು ತಮ್ಮ ‘ದೀವಟಿಗೆಗಳು’ ಎಂಬ ಪುಸ್ತಕದಲ್ಲಿ ನಿರೂಪಿಸುತ್ತಾರೆ. ಅದರ ಸಾರಾಂಶ ಹೀಗಿದೆ: ಡಿ.ವಿ.ಜಿ.ಅವರ ಆತ್ಮೀಯರೊಬ್ಬರ ಮನೆಯಲ್ಲಿ ಆರತಕ್ಷತೆ ಇರುತ್ತದೆ. ಅಲ್ಲಿಗೆ ತಮ್ಮ ಪತ್ನಿ ಏಕೆ ಹೋಗಿಲ್ಲವೆಂದು ಒತ್ತಾಯಪೂರ್ವಕವಾಗಿ ಕಾರಣ ಕೇಳುತ್ತಾರೆ. ಆಕೆ ಹೀಗೆ ತಿಳಿಸುತ್ತಾರೆ: ‘ನಾನು ಹೇಳಲೇ ಬಾರದೆಂದು ಮನಸ್ಸುಮಾಡಿದ್ದೆ. ಆದರೆ ನೀವು ನನ್ನ ಬಾಯಿ ಬಿಡಿಸುತ್ತಿದ್ದೀರಿ. ಇರುವ ಸಂಗತಿ ನಾನೀಗ ಹೇಳದೇ ವಿಧಿಯಿಲ್ಲ. ನೋಡಿ, ನನ್ನ ಹತ್ತಿರ ಇರುವುದು ಇದೊಂದೇ ಸೀರೆ! ಇದೂ ಒಂದೆರಡು ಕಡೆ ಹರಿದಿದೆ. ಬೇರೆಯವರ ಮನೆಗೆ ಹೋಗುವಾಗ ಇಂಥಾ ಮಾಸಲು, ಹರಕುಸೀರೆಯನ್ನುಟ್ಟುಕೊಂಡು ಹೋಗುವುದು ಅವಮರ್ಯಾದೆಯಲ್ಲವೇ? ಕರೆದವರ ಮನೆಗೆ ಹೋಗಿ ಬರುವುದು ಹೇಗೆ ಕರ್ತವ್ಯವೋ, ಹಾಗೆಯೇ ನಿಮ್ಮ ಮರ್ಯಾದೆಗೆ ಭಂಗ ಬಾರದಂತೆ ನಡೆದುಕೊಳ್ಳುವುದೂ ನನ್ನ ಕರ್ತವ್ಯವಲ್ಲವೇ? ಹೊಸ ಸೀರೆಯನ್ನು ಕೊಂಡುಕೊಡಿರೆಂದು ನಾನು ನಿಮ್ಮನ್ನು ಕೇಳುತ್ತಿಲ್ಲ. ಆದರೆ ಈ ಸಂದರ್ಭದಲ್ಲಿ ನನಗೆ ಯುಕ್ತವೆಂದು ತೋರಿದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೇನೆ. ಅದಕ್ಕೆ ಅಡ್ಡಿಪಡಿಸಬಾರದು ಎಂಬುದಷ್ಟೇ ನನ್ನ ಬೇಡಿಕೆ.’

ಪ್ರೊ. ಟಿ. ಎಸ್. ವೆಂಕಣ್ಣಯ್ಯನವರು ನಾ. ಕಸ್ತೂರಿ, ಜಿ. ವೆಂಕಟಸುಬ್ಬಯ್ಯ, ವಿ. ಸೀ., ಕುವೆಂಪು ಇಂಥಾ ಸಾಹಿತ್ಯ ಸೈಂಧವರಿಗೆಲ್ಲಾ ಒಂದಲ್ಲೊಂದು ರೀತಿಯಲ್ಲಿ ಗುರುಗಳು. ಮೇರುಕವಿ ಕುವೆಂಪು ಅವರ ಪಾಲಿಗೆ ಪ್ರೇರಕ ಶಕ್ತಿಯಂತಿದ್ದವರು. ಈ ಕಾರಣದಿಂದಲೇ ಕುವೆಂಪು ಅವರು ತಮ್ಮ ‘ಶ್ರೀ ರಾಮಾಯಣ ದರ್ಶನಂ? ಮಹಾಕಾವ್ಯವನ್ನು ಗೌರವಾಭಿಮಾನದಿಂದ ವೆಂಕಣ್ಣಯ್ಯನವರಿಗೆ ಅರ್ಪಿಸಿದ್ದಾರೆ. ತಮ್ಮ ಉಪನ್ಯಾಸಕ ವೃತ್ತಿಯ ಬಹುಪಾಲು ಭಾಗವನ್ನು ಮೈಸೂರಿನ ಮಹಾರಾಜಾ ಕಾಲೇಜಿನಲ್ಲೇ ಕಳೆದು ಎಷ್ಟೆಲ್ಲಾ ಕೀರ್ತಿವಂತರಾಗಿದ್ದರೂ ವೆಂಕಣ್ಣಯ್ಯನವರು ಅಸುನೀಗಿದಾಗ ಅವರ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿತ್ತು. ಅವರ ಮನೆಯವರು ಹೆಚ್ಚೇನೂ ಸುದ್ದಿಮಾಡದೇ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಿದರು. ನಂತರ ಸಂಪ್ರದಾಯದಂತೆ ಅವರ ಕರ್ಮಗಳನ್ನು ವಿಧಿವತ್ತಾಗಿ ನೆರವೇರಿಸಿ ಕೊನೆಯಲ್ಲಿ ವೈಕುಂಠಸಮಾರಾಧನೆಯನ್ನು ಮಾಡಲು ಅವರ ರಜೆಯಕಾಲದ ಸಂಬಳದ ಹಣವನ್ನು ಪ್ರಯಾಸಕರವಾಗಿ ಪಡೆಯುತ್ತಾರೆ.

ಇಂಥಾ ಅನೇಕ ಮನಮಿಡಿಯುವ ಪ್ರಸಂಗಗಳನ್ನು ಬಿ. ಎಸ್. ಕೇಶವಮೂರ್ತಿಯವರು ತಮ್ಮ ‘ಅಂತಃಕರಣ’ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ. ‘ಇಲ್ಲಿರುವ ಪ್ರಸಂಗಗಳು ಓದುಗರ ಮನಮಿಡಿಯುವುದೇ ಅಲ್ಲದೇ ನಿರ್ದಿಷ್ಟವಾದ ಸಂದೇಶಗಳನ್ನೂ ನೀಡುತ್ತವೆ. ಕೆಲವರ ಸ್ವಭಾವ, ಮನೋಧರ್ಮ ಹಾಗೂ ನಡೆವಳಿಕೆಯನ್ನೂ ಇಲ್ಲಿಯ ಬರಹಗಳು ತಿದ್ದಬಹುದು. ಬಹುದು ಏನು, ತಿದ್ದಿಯೇ ತೀರುತ್ತವೆ ಎಂಬುದರಲ್ಲಿ ಸಂಶಯ ಸಲ್ಲದು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಹಾಗೂ ನಂಬಿಕೆ,’ ಎನ್ನುತ್ತಾರೆ ಲೇಖಕರು. ಇಂಥಾ ಆಶಾಭಾವನೆಯಲ್ಲಿಯೇ ಸಕಾರಾತ್ಮಕ ಬದುಕಿನತ್ತ ಹೆಜ್ಜೆಯಿಡೋಣ.

12 comments:

  1. ಮೇಡಂ;ಈಗಷ್ಟೇ ನಾಡ ಹಬ್ಬದ ಸಂಭ್ರಮ ಆಚರಿಸಿದ ಸಂಧರ್ಭದಲ್ಲಿ ಸೂಕ್ತಲೇಖನ.
    ಡಿ.ವಿ.ಜಿ.ಯವರು ಅಂತಹ ಆರ್ಥಿಕ ಸಂಕಷ್ಟದಲ್ಲೂ ಮತ್ತೊಬ್ಬರಿಂದ ಸಹಾಯ ಪಡೆಯುವುದನ್ನು ನಿರಾಕರಿಸುತ್ತಿದ್ದರಂತೆ!ಅವರ ಬಳಿ ಬೇರೆಯವರು ಕೊಟ್ಟ ಎಷ್ಟೋ ಚೆಕ್ ಗಳು ಹಾಗೆ ಉಳಿದುಬಿಟ್ಟಿದ್ದವಂತೆ!ಆ ಕಾಲದಲ್ಲಿ ಬಹುದೊಡ್ಡ ಮೊತ್ತವಾಗಿದ್ದ ಒಂದು ಲಕ್ಷದಷ್ಟು ತಮಗೆ ಬಂದ ಹಣವನ್ನು ಗೋಖಲೆ ಸಾರ್ವಜನಿಕ ಸಂಸ್ಥೆಗೆ ಕೊಟ್ಟು ಬಿಟ್ಟಿದ್ದರಂತೆ.ಎಂತಹ ಉದಾತ್ತ ಬಾಳ್ವೆ ಅವರದು!ಒಳ್ಳೆಯ ಮಾಹಿತಿಯುಕ್ತ ಲೇಖನಕ್ಕೆ ಧನ್ಯವಾದಗಳು ಮೇಡಂ.

    ReplyDelete
  2. ಕನ್ನಡ ಸಾಹಿತಿಗಳ ಆರ್ಥಿಕ ಸ್ಥಿತಿಯ ಧಾರುಣತೆಯನ್ನು ಮನಮುಟ್ಟುವಂತೆ ನಿರೂಪಿಸಿದ್ದೀರಿ. ವಿಷಯಾಧರಿತ ಲೇಖನಗಳನ್ನು ಕಟ್ಟಿಕೊಡುವುದರಲ್ಲಿ ನಿಮಗೆ ನೀವೆ ಸಾಟಿ!

    ReplyDelete
  3. ಪ್ರಭಾಮಣಿಯವರೆ,
    ಕನ್ನಡ ನಾಡಿನ ಹಿರಿಯ ಚೇತನರ ಮನ ಕರಗುವ ವೃತ್ತಾಂತಗಳನ್ನು ನಿರೂಪಿಸಿದ್ದೀರಿ. ಆ ಚೇತನಗಳಿಗೆ ಪ್ರಣಾಮಗಳು. ನಿಮಗೆ ಧನ್ಯವಾದಗಳು.

    ReplyDelete
  4. @Dr.D.T.ಕೃಷ್ಣಮೂರ್ತಿಯವರೇ,
    ನಿಮ್ಮ ಮಾತು ಸತ್ಯ ಸರ್, ಡಿ.ವಿ.ಜಿ.ಯವರು ತಮ್ಮ ಕೆಲಸ ಕಾರ್ಯಗಳಿಗೆ ಚೆಕ್ ರೂಪದಲ್ಲಿ ಬಂದ ಗೌರವ ಧನವನ್ನು ಡ್ರಾ ಮಾಡದೆ ಡ್ರಾಯರಿನಲ್ಲಿ ಎಸೆದಿದ್ದರು. ಅವರ ಮರಣಾ ನ೦ತರ ವೈಕು೦ಠದ ದಿನದ೦ದು ಪ್ರದರ್ಶನಕ್ಕೆ೦ಬ೦ತೆ ಒ೦ದುಕಡೆ ಇರಿಸಲಾಗಿತ್ತು ಎ೦ದು ನಾನೂ ಓದಿದ್ದೆ. ಪ್ರತಿಕ್ರಿಯೆಗಾಗಿ ಧನ್ಯವಾದಗಳು.

    ReplyDelete
  5. @ಬದರಿನಾಥ್ ಪಲವಳ್ಳಿಯವರೇ,
    ನಿಮ್ಮ ಅಭಿಮಾನ ಪೂರ್ವಕ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

    ReplyDelete
  6. @ಸುನಾಥ್ ರವರೇ,
    ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.

    ReplyDelete
  7. @ಗುಬ್ಬಚ್ಚಿ ಸತೀಶ್ ರವರೇ,
    ನಿಮ್ಮ ಸಹಮತಕ್ಕಾಗಿ ಧನ್ಯವಾದಗಳು.

    ReplyDelete
  8. ಹಿರಿಯ ಚೇತನಗಳ ಬಗ್ಗೆ ಸೂಕ್ತ ಸಮಯದಲ್ಲಿ ಒಳ್ಳೆ ಲೇಖನ ಕೊಟ್ಟಿದ್ದಿರಿ...ಅವರ ಸ್ಥಿತಿಗಳು ಮನ ಮುಟ್ಟಿತು...

    ReplyDelete
  9. @ ಗಿರೀಶ್.ಎಸ್ ರವರೆ,
    ನಿಜಕ್ಕೂ ಆ ಧೀಮ೦ತ ವ್ಯಕ್ತಿಗಳ ಆರ್ಥಿಕ ಸ್ಥಿತಿ ಮನ ಕರಗುವ೦ಥದ್ದು. ಪ್ರತಿಕ್ರಿಯೆಗಾಗಿ ಧನ್ಯವಾದಗಳು.

    ReplyDelete
  10. ಪ್ರಭಾಮಣಿಯವರೇ ನಿಮ್ಮ ಮಾತು ನಿಜ, ಕನ್ನಡ ಸಾಹಿತ್ಯ ಲೋಕದ ಎಷ್ಟೋ ಹಿರಿ ಚೇತನಗಳ ಕಡೆ ಸರ್ಕಾರದ ಗಮನವೂ ಇಲ್ಲ ಎನ್ನುವುದು ನಿಜ...
    ರಾಜ್ಯೋತ್ಸವದ ಸಂದರ್ಭದಲ್ಲಿ ಒಳ್ಳೆ ಸಮ್ಯೋಚಿತ ಲೇಖನ

    ReplyDelete
  11. ಮೇಡಂ,
    ಬ್ಲಾಗಿನಲ್ಲಿ ನಿಮ್ಮ ಫೋಟೋ ನೋಡಿ ಖುಷಿಯಾಯಿತು.
    ಪ್ರಸಂಗಗಳನ್ನು ನೀವು ನೀರೂಪಿಸಿರುವ ರೀತಿ ಚೆನ್ನಾಗಿದೆ.
    ನಿಮಗೂ ಮತ್ತು ಆ ಚೇತನಗಳಿಗೂ ವಂದನೆಗಳು
    ಸ್ವರ್ಣ

    ReplyDelete